ಸೋಮವಾರಪೇಟೆ, ಮಾ. 6: ಸಂತೆ ದಿನವಾದ ಸೋಮವಾರ ದಂದು ಲಾಕ್‍ಡೌನ್ ಸಡಿಲಿಕೆ ಇದ್ದುದರಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಪಟ್ಟಣಕ್ಕೆ ಮುಗಿಬಿದ್ದರು.
ಸೋಮವಾರಪೇಟೆಯಲ್ಲಿ ನಡೆಯುವ ಸಂತೆಯನ್ನು ಮಾರುಕಟ್ಟೆ ಆವರಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸ ಲಾಗಿದ್ದು, ಆರ್‍ಎಂಸಿ ಆವರಣದಲ್ಲಿ ಜನಜಂಗುಳಿ ಕಂಡುಬಂತು.ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಂದಿ ಗುಂಪು ಗುಂಪಾಗಿ ಅಂಡಿಗಳ ಎದುರು ನಿಂತು ವಸ್ತುಗಳನ್ನು ಖರೀದಿಸಿದರು. ಕೊರೊನಾ ವೈರಸ್‍ನ ಆತಂಕದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಆಗಾಗ್ಗೆ ಮೈಕ್‍ನಲ್ಲಿ ಸೂಚನೆ ನೀಡುತ್ತಿದ್ದರೂ ಸಹ, ಪೊಲೀಸ್ ಜೀಪ್ ಅತ್ತ ತೆರಳಿದಂತೆ ಮತ್ತೆ ಸಾರ್ವಜನಿಕರು ಗುಂಪುಗೂಡಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಒಂದು ಮೀಟರ್ ಅಂತರದಲ್ಲಿ ಮಾರ್ಕಿಂಗ್ ಇದ್ದರೂ ಸಹ ಬಹುತೇಕ ಮಂದಿ ಇದನ್ನು ಪಾಲಿಸಲಿಲ್ಲ. ಆದರೆ ಪಟ್ಟಣದೊಳಗೆ ಇರುವ ದಿನಸಿ ಅಂಗಡಿಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸಿದರು.
(ಮೊದಲ ಪುಟದಿಂದ) ಪಟ್ಟಣದಲ್ಲಿರುವ ವಿವಿಧ ಬ್ಯಾಂಕ್‍ಗಳ ಎಟಿಎಂಗಳ ಎದುರು ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡಿದರು. ತರಕಾರಿ ಮತ್ತು ದಿನಸಿ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು. ಪಟ್ಟಣದಾದ್ಯಂತ ಸಂಚರಿಸಿದ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು, ಮೈಕ್ ಮೂಲಕ ಸಾರ್ವಜನಿಕರು ಮತ್ತು ಅಂಗಡಿಗಳ ಮಾಲೀಕರುಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದರು.
ಸಂತೆ ದಿನವಾದ ಹಿನ್ನೆಲೆ ಪಟ್ಟಣಕ್ಕೆ ಸಾವಿರಾರು ವಾಹನಗಳು ಆಗಮಿಸಿದವು. ಪಟ್ಟಣದ ಕ್ಲಬ್‍ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಮುಖ್ಯರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಯೂ ಆಯಿತು. ಗ್ರಾಮೀಣ ಭಾಗದಿಂದ ಕೂಲಿ ಕಾರ್ಮಿಕರನ್ನು ಪಿಕ್‍ಅಪ್, ಜೀಪ್, ಮಾರುತಿ ಓಮ್ನಿ ವಾಹನಗಳಲ್ಲಿ ಪಟ್ಟಣಕ್ಕೆ ಕರೆತಂದು, ವ್ಯಾಪಾರ ವಹಿವಾಟು ಮುಗಿದ ನಂತರ ಗ್ರಾಮಗಳಿಗೆ ಕರೆದೊಯ್ಯಲಾಯಿತು.
ಬಹುತೇಕ ಮಂದಿ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ವ್ಯಾಪಾರ ವಹಿವಾಟು ನಡೆಸಿದರು. ಪಟ್ಟಣದಲ್ಲಿ ಜನರು ಗುಂಪುಗೂಡುವದನ್ನು ತಡೆಯಲು ಪೊಲೀಸ್ ಸಿಬ್ಬಂದಿಯೊಂದಿಗೆ ಗೃಹ ರಕ್ಷಕ ದಳದವರೂ ಶಕ್ತಿಮೀರಿ ಶ್ರಮಿಸುತ್ತಿದ್ದರು.
ಮಧ್ಯಾಹ್ನ 12 ಗಂಟೆಯಾಗುತ್ತಲೇ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಠಾಣಾಧಿಕಾರಿ ಶಿವಶಂಕರ್ ಸೂಚನೆ ನೀಡಿದರು. ಬೆಳಿಗ್ಗೆ 6 ಗಂಟೆಯಿಂದಲೇ ಗಿಜಿಗಿಡುತ್ತಿದ್ದ ಪಟ್ಟಣ ಮಧ್ಯಾಹ್ನ 12 ಗಂಟೆಗೆ ಸಂಪೂರ್ಣ ಲಾಕ್‍ಡೌನ್ ಆಯಿತು.
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಸೋಮವಾರ ನಿತ್ಯೋಪಯೋಗಿ ತರಕಾರಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದರು.
ಜಿಲ್ಲಾಡಳಿತ ಆಹಾರ ಸಾಮಗ್ರಿಗಳನ್ನು ಖರೀದಿಸಲು ವಾರದಲ್ಲಿ 3 ದಿನಗಳನ್ನು ಸೂಚಿಸಿದ್ದು, ಸೋಮವಾರ ಮಾತ್ರ ತೋಟ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.
ಮಾಸ್ಕ್ ಮತ್ತು ಕರವಸ್ತ್ರಗಳನ್ನು ಧರಿಸಿಕೊಂಡು ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಎಡವಿದ್ದು ಕಂಡು ಬಂತು.
ಖಾಸಗಿ ಹಾಗೂ ಬಾಡಿಗೆ ವಾಹನಗಳ ದಟ್ಟಣೆಯು ಬೆಳಿಗ್ಗಿನಿಂದಲೇ ಕಂಡು ಬಂದಿದ್ದು ಭಾನುವಾರಂದು ನಡೆಯುವ ಸಂತೆಯಂತೆ ಪಟ್ಟಣದಲ್ಲಿ ಭಾಸವಾಗಿತ್ತು. ಪೊಲೀಸರ ಕಣ್ತಪ್ಪಿಸಿ ಓಡಾಟ
ಕುಶಾಲನಗರದ ಗಡಿಭಾಗ ಕೊಪ್ಪ ಬಳಿ ಕೊಡಗು ಜಿಲ್ಲೆ ಮತ್ತು ಮೈಸೂರು ಜಿಲ್ಲೆ ಪೊಲೀಸರು ಮತ್ತು ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ದಿನದ 24 ಗಂಟೆ ಜನರ ಓಡಾಟಕ್ಕೆ ನಿರ್ಬಂಧ ಹೇರಿದ್ದು ಅಗತ್ಯ ವಾಹನಗಳನ್ನು ಮಾತ್ರ ಬಿಡಲು ಕ್ರಮಕೈಗೊಂಡಿದ್ದಾರೆ. ಯಾವುದೇ ರೀತಿಯಲ್ಲಿ ಹೊರಗಿನ ಜನರು ಜಿಲ್ಲೆಗೆ ಬರದಂತೆ ತಡೆಯುವಲ್ಲಿ ಬಹುತೇಕ ಯಶಸ್ವಿಯಾದರೂ ಇತ್ತ ಕೆಲವರು ಪೊಲೀಸರ ಕಣ್ತಪ್ಪಿಸಿ ಪಟ್ಟಣದತ್ತ ಮತ್ತು ಪಟ್ಟಣದಿಂದ ಹೊರಹೋಗುವಲ್ಲಿ ಯಶಸ್ವಿಯಾಗುತ್ತಿರುವುದು ಗೋಚರಿಸಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ ಅಪಾಯಕಾರಿ ವ್ಯವಸ್ಥೆಯಲ್ಲಿ ಮಕ್ಕಳು, ಮಹಿಳೆಯರೆನ್ನದೆ ಓಡಾಟ ನಡೆಸುತ್ತಿರುವುದು ಮಾತ್ರ ಆತಂಕಕಾರಿ ಬೆಳವಣಿಗೆಯಾಗಿದೆ.
ಕುಶಾಲನಗರ ಪಟ್ಟಣ ಬಹುತೇಕ ಕಾವೇರಿ ನದಿಯಿಂದ ಸುತ್ತುವರೆದಿದ್ದು ಕುಶಾಲನಗರದಿಂದ ಹೊರಹೋಗಲು ನದಿಯ ಹಾದಿಯನ್ನು ಕಂಡುಹಿಡಿಯುವ ಮೂಲಕ ಕಾಲ್ನಡಿಗೆಯಲ್ಲೇ ಓಡಾಟ ಪ್ರಾರಂಭಿಸಿರುವುದು ಕಂಡುಬಂದಿದೆ. ಬೈಚನಹಳ್ಳಿ ಪಂಪ್‍ಹೌಸ್ ಬಳಿ ಈ ಜನ ಅಡ್ಡದಾರಿಯನ್ನು ಕಂಡುಹಿಡಿದಿದ್ದು ಈ ಮೂಲಕ ಸಣ್ಣಪುಟ್ಟ ವ್ಯಾಪಾರ ವಹಿವಾಟು ಕೂಡ ನಡೆಯುತ್ತಿದೆ.
ಮೈಸೂರು ಜಿಲ್ಲೆಯ ಗಡಿಗ್ರಾಮಗಳಿಂದ ತರಕಾರಿ ಮತ್ತಿತರ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡು ಕುಶಾಲನಗರದತ್ತ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಭಾನುವಾರವಂತೂ ಕೋಳಿ, ಕುರಿಗಳನ್ನು ಕೆಲವರು ಸಾಗಾಟ ಮಾಡುತ್ತಿರುವುದು ಕಂಡುಬಂತು. ಮೈಸೂರು ಜಿಲ್ಲೆಯಲ್ಲಿ ನಗರದಲ್ಲಿ ಮಾತ್ರ ಬಿಗಿ ಬಂದೋಬಸ್ತ್ ಹೊರತುಪಡಿಸಿದರೆ ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ನಾಮಕಾವಸ್ಥೆಗೆ ಪೊಲೀಸರು ಕೆಲಸ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಕೊಪ್ಪ ಮೂಲಕ ವಾಹನಗಳು ಬರುತ್ತಿವೆ ಎಂದು ಕೊಪ್ಪ ಗಡಿಭಾಗದ ಪೊಲೀಸರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.