ಕುಶಾಲನಗರ, ಏ. 5: ಲಾಕ್‍ಡೌನ್ ಹಿನೆÀ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸೇರಿದಂತೆ ಎಲ್ಲೆಡೆ ನಡೆಯಬೇಕಾಗಿದ್ದ ಬಹುತೇಕ ಮದುವೆ ಸಮಾರಂಭಗಳು ರದ್ದುಗೊಂಡಿದ್ದರೂ ಅಲ್ಲಲ್ಲಿ ಬೆರಳೆಣಿಕೆ ಮಂದಿ ಸೇರುವುದರೊಂದಿಗೆ ದೇವಾಲಯಗಳಲ್ಲಿ ನವ ವಧುವರರು ಹಸೆಮಣೆಗೆ ಏರಿರುವುದು ಕಾಣಬಹುದು.

ಇದೇ ರೀತಿ ಗುಡ್ಡೆಹೊಸೂರು ಸಮೀಪದ ಯುವತಿಯೊಬ್ಬಳ ಮದುವೆ ಹಿಂದೆ ನಿಶ್ಚಯಿಸಿದಂತೆ ಹುಣಸೂರಿನ ಯುವಕನೊಂದಿಗೆ ನಂಜನಗೂಡಿನಲ್ಲಿ ನಡೆಯಬೇಕಿತ್ತು. ಆದರೆ ನಂಜನಗೂಡಿನಲ್ಲಿ ಮಹಾಮಾರಿ ಕೊರೊನಾ ಸ್ಪೋಟಗೊಂಡಿದ್ದೇ ತಡ ಮದುವೆ ರದ್ದುಗೊಂಡು ನಂತರ ಅದನ್ನು ಬಿಳಿಕೆರೆಯಲ್ಲಿ ಮಾಡುವ ಬಗ್ಗೆ ಪೋಷಕರು ನಿರ್ಧಾರಕ್ಕೆ ಬಂದರೂ ಅದೂ ಕೂಡ ರದ್ದುಗೊಂಡು ನಂತರ ಹುಣಸೂರು ಬಳಿಯ ದೇವಾಲಯವೊಂದರಲ್ಲಿ ಮದುವೆ ಸರಳವಾಗಿ ಮುಗಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡರೂ ಅದು ಕೂಡ ಈಡೇರುವುದು ಅಸಾಧ್ಯ ಎನ್ನುವಂತಾಯಿತು.

ಬಡ ಕುಟುಂಬದ ಈ ಮದುವೆ ಅಂತಿಮ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಹೇಗಾದರೂ ಮದುವೆಯನ್ನು ನಡೆಸುವ ನಿರ್ಧಾರಕ್ಕೆ ಬಂದ ಪೋಷಕರು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕಂಡಕಂಡವರನ್ನು ಕಾಡಿ ಬೇಡಿದರೂ ಪ್ರಯೋಜನವಾಗದೆ ಅಂತಿಮ ಹಂತದಲ್ಲಿ ಮದುಮಗಳು ತನ್ನ ತಂದೆತಾಯಿ ಜೊತೆಗೆ ಗಡಿಭಾಗವಾದ ಕೊಪ್ಪ ತನಕ ಬಂದು ಸ್ಥಳೀಯ ಪತ್ರಕರ್ತರ ಸಹಕಾರ ಕೋರಿದ್ದಾರೆ.

ಪತ್ರಕರ್ತರಾದ ವನಿತಾ ಚಂದ್ರಮೋಹನ್, ಮಡಿಕೇರಿಯ ಸಂತೋಷ್ ಈ ಸಂದರ್ಭ ಮದುಮಗಳನ್ನು ಮಡಿಕೇರಿಯಿಂದ ಹುಣಸೂರು ಕಡೆಗೆ ತೆರಳುವ ಪತ್ರಿಕೆ ಸರಬರಾಜು ಮಾಡುವ ಕಾರು ಮೂಲಕ ಕಳುಹಿಸಿಕೊಡಲು ಸಿದ್ಧತೆ ನಡೆಸಿದರು. ಭಾನುವಾರ ಹುಣಸೂರಿನ ಬನ್ನಿಕೊಪ್ಪೆ ಬಳಿ ಕೇವಲ ಬೆರಳೆಣಿಕೆಯ ಮಂದಿ ಸಮ್ಮುಖದಲ್ಲಿ ದೇವಾಲಯದಲ್ಲಿ ವಧುವರರು ಹಸೆಮಣೆ ಏರುವುದರೊಂದಿಗೆ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

-ಸಿಂಚು