ದೆಹಲಿಗೆ ತೆರಳಿದವರ ಸಂಖ್ಯೆ 24 ಮಡಿಕೇರಿ, ಏ. 5: ಕೊರೊನಾ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ತೆರಳಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಅದರಂತೆ ಇಂದು ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 196, ವೀರಾಜಪೇಟೆ ತಾಲೂಕಿನಲ್ಲಿ 162 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 128 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 398 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 78 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 1 ಪ್ರಕರಣ ದೃಢಪಟ್ಟಿದ್ದು, 60 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿರುತ್ತದೆ. 17 ಪ್ರಕರಣಗಳಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ.

(ಮೊದಲ ಪುಟದಿಂದ) ಪ್ರಸ್ತುತ ಸೋಂಕು ದೃಢಪಟ್ಟ 1 ಪ್ರಕರಣ ಮತ್ತು 17 ಸೋಂಕು ಶಂಕಿತ ಪ್ರಕರಣಗಳು ಸೇರಿದಂತೆ ಒಟ್ಟು 18 ಪ್ರಕರಣಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ. ದೆಹಲಿ ಧಾರ್ಮಿಕ ಸಭೆಯ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿ ಹಿಂತಿರುಗಿರುವವರ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಮತ್ತೆ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಿಂದ ದೆಹಲಿಗೆ ತೆರಳಿದವರ ಸಂಖ್ಯೆ ಒಟ್ಟು 24 ಆಗಿದೆ. ಈಗಾಗಲೇ ನೀಡಿರುವ ಮಾಹಿತಿಯಂತೆ 5 ಜನರು ದೆಹಲಿಯಲ್ಲಿ ಕ್ವಾರಂಟೈನ್‍ನಲ್ಲಿದ್ದು, ಇನ್ನೂ 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ ಎಲ್ಲಾ 14 ಜನರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್‍ನಲ್ಲಿ ಇರಿಸಲಾಗಿದ್ದು, ಇವರಿಗೆ ಕೊರೊನಾ ವೈರಸ್‍ನ ಲಕ್ಷಣಗಳಿರುವುದಿಲ್ಲವಾದರೂ ಇವರ ಗಂಟಲು ದ್ರವ ಮಾದರಿಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.