ಸೋಮವಾರಪೇಟೆ, ಏ. 5: ‘ಹಸಿವು ಹೊಟ್ಟೆಗೆ-ತಣಿವು ಪೆಟ್ಟಿಗೆ’ ಕಾರ್ಯಕ್ರಮದಡಿ ತಹಶೀಲ್ದಾರ್ ಗೋವಿಂದರಾಜು ಅವರು ತಾಲೂಕು ಕಚೇರಿಯಲ್ಲಿ ಕಡುಬಡವರಿಗೆ ಪಡಿತರ ವಿತರಿಸಿದರು.
ನಂತರ ಮಾತನಾಡಿದ ಅವರು, ಪಡಿತರ ಚೀಟಿಯಿಲ್ಲದ ಕಡುಬಡವರಿಗೆ ಅವರವರ ಮನೆಗೆ ತೆರಳಿ ಪಡಿತರ ವಿತರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ.ಪಂ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು ಬಡವರ ಪಟ್ಟಿ ಪಡೆದು ಪಡಿತರ ವಿತರಿಸುತ್ತಿದ್ದಾರೆ. ಶನಿವಾರ ಸಂಜೆಗೆ ಈ ಕಾರ್ಯ ಮುಗಿಯಲಿದ್ದು, ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ತಾಲೂಕಿನಲ್ಲಿ 1496 ಕಿಟ್‍ಗಳನ್ನು ವಿತರಿಸಲಾಗಿದೆ. 10 ಕೆ.ಜಿ. ಅಕ್ಕಿ, 2 ಕೆ.ಜಿ. ಗೋದಿ ಹಿಟ್ಟು, ತೊಗರಿ ಬೇಳೆ, ಉಪ್ಪು, ಸಕ್ಕರೆ, ಅಡಿಗೆ ಎಣ್ಣೆ ತಲಾ ಒಂದು ಕೆ.ಜಿ. ಇರುತ್ತದೆ ಎಂದು ಹೇಳಿದರು. ತಾಲೂಕಿನ 124 ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, ಗೋಧಿ ಸರಬರಾಜು ಮಾಡಲಾಗಿದೆ. ಎರಡು ತಿಂಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಸ್ಥಳದಲ್ಲೇ ಟೋಕನ್ ಕೊಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಸ್ಥಿತವಾಗಿ ಪಡಿತರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ರಮೇಶ್, ಅರೋಗ್ಯ ನಿರೀಕ್ಷಕ ಉದಯಕುಮಾರ್, ಆಹಾರ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.