ಸಮಾಜಮುಖಿ ಉದ್ದೇಶ ಹೊಂದಿದ್ದ ನಮ್ಮ ಬ್ಯಾಂಕ್, ಬಡ ವಿದ್ಯಾರ್ಥಿ ಗಳಿಗೆ ಕರಕುಶಲ ತರಬೇತಿ ನೀಡಲು ಕೆ ಪಿ ಜೆ ಪ್ರಭು ಟ್ರಸ್ಟ್ ಮೂಲಕ ‘ಕೌಶಲ್ಯ’ ಎಂಬ ಸಂಸ್ಥೆಯನ್ನು ನಡೆಸುತ್ತಿತ್ತು. ಅದರ ನಾಮಫಲಕದಲ್ಲಿ ‘ಕೌಶಲ್ಯ (ಪ್ರಾಯೋಜಕರು: ಕೆ ಪಿ ಜೆ ಪ್ರಭು ದÀತ್ತಿ ನಿದಿ)’ ಎಂದಿತ್ತು. ಈ ಸಂಸ್ಥೆ ಬೆಂಗಳೂರಿನ ಕನ್ನಿಂಗಹ್ಯಾಂ ರಸ್ತೆಯಲ್ಲಿತ್ತು. ಕಟ್ಟಡದ ಗುತ್ತಿಗೆ ಅವಧಿ ಮುಗಿದಾಗ, ತನಗೆ ವಸತಿಗಾಗಿ ಈ ಕಟ್ಟಡ ಬೇಕೆÀನ್ನುವ ಕಾರಣದೊಂದಿಗೆ, ಕಟ್ಟಡವನ್ನು ಖಾಲಿ ಮಾಡಿಕೊಡುವಂತೆ ವಕೀಲರ ಮೂಲಕ ನೋಟೀಸ್ ನೀಡಿದರು ಮಾಲೀಕ ನಟರಾಜ್. ಬ್ಯಾಂಕಿನವರೂ ಕೋರ್ಟಿಗೆ ಹೋದ ಕಾರಣದಿಂದಾಗಿ, ಸಂಸ್ಥೆಯಲ್ಲಿ ವ್ಯವಸ್ಥಾಪಕನಾಗಿದ್ದ ನನ್ನ ಹೆಗಲ ಮೇಲೆ ಕೋರ್ಟಿಗೆ ಅಲೆಯುವ ಜವಾಬ್ದಾರಿ ಬಂತು. ಹಾಗಂತ ನಟರಾಜ್ ಅದೇ ಕಟ್ಟಡದ ಹಿಂಭಾಗದಲ್ಲಿ ಮನೆ ಹೊಂದಿದ್ದರು. ದಿನಾಲೂ ನನ್ನಲ್ಲಿ ಬಂದು ಅರ್ಧ ಗಂಟೆಯಾದರೂ ಹರಟೆ ಹೊಡೆಯುತ್ತಿದ್ದರು. ಕೆಲವೊಮ್ಮೆ ಬೈಟು ಕಾಫಿ ಕುಡಿಯಲು ಹತ್ತಿರದ ಅರಸು ಹೋಟೆಲಿಗೆ ಕರೆದೊಯ್ಯುತ್ತಿದ್ದರು. ನಾವು ಉತ್ತಮ ಸ್ನೇಹಿತರಂತೂ ಆಗಿದ್ದೆವು. ನಮ್ಮ ಪರವಾಗಿ ಅಂದಿನ ಸುಪ್ರಸಿದ್ಧ ಹೈಕೋರ್ಟ್ ವಕೀಲರಾದ ಕಳಸಾ ಶಾಮಣ್ಣನವರು ಕೇಸನ್ನು ಮುನ್ನಡೆಸುವವರಾಗಿದ್ದರು. ಕೋರ್ಟಿನ ಕಾರ್ಯಕಲಾಪದಲ್ಲಿ ಅಂದು ನನ್ನ ಜೀವನದಲ್ಲಿ ಮೊದಲ ಬಾರಿಗೆ ಕಟಕಟೆಯಲ್ಲಿ ನಿಂತಿದ್ದೆ. ಶಾಮಣ್ಣನವರ ಸಹಾಯಕ ವಕೀಲರು ನನ್ನ ‘ಹಿಯರಿಂಗ್’ ಗಾಗಿ ಹಾಜರಿದ್ದರು. ಕೇಳುವ ಪ್ರಶ್ನೆಗಳಿಗೆ ಏನೇನು ಉತ್ತರ ಕೊಡಬೇಕೆಂದು ನನಗೆ ಮೊದಲೇ ಬಾಯಿಪಾಠ ಮಾಡಿಸಿದ್ದರು ಶಾಮಣ್ಣನವರು.

ಹಿಯರಿಂಗಿನಲ್ಲಿ ನಮ್ಮ ವಕೀಲರ ಒಂದು ಪ್ರಶ್ನೆ, ‘ತಮಗೆ ಉಳಿದುಕೊಳ್ಳಲು ಮನೆ ಇಲ್ಲ ಅಂತ ಹೇಳಿ ನೋಟೀಸ್ ಕೊಟ್ಟಿದ್ದಾರೆ ನಟರಾಜ್ ಮಾನವೀಯ ದೃಷ್ಟಿಯಿಂದ ನೀವು ಏಕೆ ಕಟ್ಟಡ ಖಾಲಿ ಮಾಡಿಕೊಡಬಾರದು ?’ ನಮ್ಮ ವಕೀಲರ ಸೂಚನೆಯಂತೆ ತಂದಿದ್ದ ಕಾಗದ ಕೊಟ್ಟು, ‘ಇದರಲ್ಲಿದೆ ಉತ್ತರ’ ಎಂದೆ.

ಆ ಕಾಗದ ನಟರಾಜಾರವರು ನಮ್ಮ ಬ್ಯಾಂಕಿಗೆ ಈ ಹಿಂದೆ ಬರೆದಿದ್ದ ಪತ್ರದ ಪ್ರತಿಯಾಗಿತ್ತು. ಅದರ ಒಕ್ಕಣೆಯನ್ನು ಜೋರಾಗಿ ಓದಿ ಹೇಳಿದರು ನಮ್ಮ ವಕೀಲರು. ಆ ಒಕ್ಕಣೆಯ ಸಾರಾಂಶ-‘ಕೌಶಲ್ಯ’ ಸಂಸ್ಥೆಯ ಕಟ್ಟಡದ ಮೇಲೆ ಎರಡು ಮಹಡಿ ಕಟ್ಟಿಸಿಕೊಡುವುದಾಗಿಯೂ; ಆ ಮಹಡಿಗಳನ್ನು ನಮ್ಮ ಬ್ಯಾಂಕಿಗೇ ಬಾಡಿಗೆಗೆ ನೀಡುವುದಾಗಿಯೂ; ನಮ್ಮ ಬ್ಯಾಂಕಿನವರು ಬಡ್ಡಿ ರಹಿತ ಸಾಲ ನೀಡಬೇಕೆಂದೂ; ಸಾಲಕ್ಕೆ ಆಧಾರವಾಗಿ ಆ ಕಟ್ಟಡ, ಹಿಂದೆ ವಾಸವಿರುವ ಮನೆ, ಶೇಷಾದ್ರಿಪುರಂ ಮತ್ತು ಇಂದಿರಾನಗರದಲ್ಲಿರುವ ಮನೆಗಳನ್ನು ಒತ್ತೆ ಇಡಲು ತಾನು ತಯಾರಿದ್ದೇನೆ.

ಪತ್ರ ಓದಿದ ನಮ್ಮ ವಕೀಲರು ಕೇಳಿದರು, ‘ವಾಸಿಸಲು ಮನೆ ಇಲ್ಲ ಎಂದು ನಟರಾಜ್ ಅವರು ಸುಳ್ಳು ಹೇಳುತ್ತಿದ್ದಾರೇನು...?’

‘ಹೌದು...’ ಎಂದೆ ನಾನು. ನನ್ನ ಹಿಯರಿಂಗ್ ಆದ ನಂತರ ಕ್ರಾಸ್ ಎಕ್ಸಾಂ ಮಾಡಲು ನಟರಾಜ್ ಅವರ ವಕೀಲರು ಸಮಯ ಕೋರಿದರು. ಮುಂದಿನ ದಿನಾಂಕ ನಿಗದಿಯಾಯಿತು. ಕೇಸ್ ಮುಂದೆ-ಮುಂದೆ ಹೋಗುತ್ತಿತ್ತು. ನಟರಾಜ್ ಬರುತ್ತಿದ್ದರು. ಅವರ ವಕೀಲರು ಬರುತ್ತಿರಲಿಲ್ಲ. ವಕೀಲರಿಗೆ ಹುಷಾರಿಲ್ಲ ಅಂತಲೊ, ವಕೀಲರು ಊರಲ್ಲಿಲ್ಲ ಅಂತಲೊ ಹೇಳುತ್ತಿದ್ದರು. ಕೆಲವೊಮ್ಮೆ ನ್ಯಾಯಾಧೀಶರು ಗೈರಾಗುತ್ತಿದ್ದರು. ಹನ್ನೊಂದು ಗಂಟೆಗೇ ಮುಂದಿನ ದಿನಾಂಕ ನಿಗದಿಯಾದರೆ ಹೊರಟು ಬಿಡಬಹುದಿತ್ತು. ಕೆಲವೊಮ್ಮೆ ನಟರಾಜ್ ಅವರು ‘ನಮ್ಮ ವಕೀಲರು ಬರುವದು ಸ್ವಲ್ಪ ತಡವಾಗುತ್ತದೆ...’ ಎಂದಾಗ ಕಾಯಬೇಕಿತ್ತು. ಆ ವೇಳೆ ನಟರಾಜರ ಜೊತೆ ಹೋಗಿ ಬೈಟು ಕಾಫಿ ಕುಡಿದು ಬಂದು, ಇಬ್ಬರೂ ಬೆಂಚಿನಲ್ಲಿ ಆಸೀನರಾಗುತ್ತಿದ್ದೆವು. ಕೆಲವೊಮ್ಮೆ ನ್ಯಾಯಾಧೀಶರು, ಒಂದಿಬ್ಬರು ವಕೀಲರು, ಗುಮಾಸ್ತರು ಹಾಗು ನಮ್ಮಿಬ್ಬರ ಹೊರತಾಗಿ ಯಾರೂ ಇರುತ್ತಿರಲಿಲ್ಲ. ಒಬ್ಬರ ಮುಖ ಒಬ್ಬರು ನೋಡಿಕೊಂಡು ಆಕಳಿಸುವದು ಸಾಮಾನ್ಯ ಸಂಗತಿ ಆಗಿ ಹೋಗಿತ್ತು.

ಒಮ್ಮೆ ನಟರಾಜರ ಜೊತೆ ಬೈಟು ಕಾಫಿ ಕುಡಿಯಲು ಹೋದಾಗ ನಮ್ಮ ವಕೀಲರು ನೋಡಿಬಿಟ್ಟರು. ನನ್ನ ಹತ್ತಿರ ಬಂದು, ‘ವಿರೋಧ ಪಕ್ಷದವರ ಜೊತೆ ಓಡಾಡಬೇಡಿ. ಮೆತ್ತಗೆ ನಮ್ಮ ಪಾಯಿಂಟುಗಳನ್ನು ತಿಳಿದುಕೊಂಡು ಬಿಡುತ್ತಾರೆ. ‘ಎಂದು ಸಣ್ಣದಾಗಿ ಗದರಿದರು. ನಮ್ಮ ವಕೀಲರ ಕಣ್ತಪ್ಪಿಸಿ ಆ ಮೇಲೂ ಹೋಗುತ್ತಿದ್ದೆವೆನ್ನಿ. ಕಾಫಿ ಕುಡಿಯಲು ಹೋದಾಗಲೆಲ್ಲ ನಟರಾಜ್ ಹೇಳುತ್ತಿದ್ದರು, ‘ನೀವು ಆ ಕಾಗದ ಕೋರ್ಟಿಗೆ ಕೊಡಬಾರದಿತ್ತು. ವಾದ ಮಾಡಲು ಪಾಯಿಂಟೇ ಇಲ್ಲ ಎಂದು ನಮ್ಮ ವಕೀಲರು ಹೇಳುತ್ತಿದ್ದಾರೆ.’

* * * * *

ಒಂದು ಕ್ರಾಸ್ ಎಕ್ಸಾಂಗಾಗಿ ಆಗಲೇ ಇಪ್ಪತ್ತೈದು ಸಲ ಬಂದಿದ್ದೆ. ಆ ದಿನವೂ ‘ನಮ್ಮ ವಕೀಲರು ಮಧ್ಯಾಹ್ನ ಬರುತ್ತಾರೆ...’ ನ್ಯಾಯಾಧೀಶರ ಮುಂದೆ ತಿಳಿಸಿದ ನಟರಾಜ್ ಜಾಗ ಖಾಲಿ ಮಾಡಿದರು. ನಾನು ನಮ್ಮ ವಕೀಲರ ಸಲಹೆಯಂತೆ ಬೆಂಚಿನ ಮೇಲೆ ಕೂತೆ. ಬೆಂಚಿನ ಮಧ್ಯ ಮಧ್ಯ ಅರ್ಧ ಇಂಚಿನಷ್ಟು ಜಾಗ ಬಿಟ್ಟುಕೊಂಡಿದ್ದುದನ್ನು ಗಮನಿಸಿದೆ. ಯಾಕೊ ಆ ಸಂಧಿಯಲ್ಲಿ ಕಣ್ಣಾಡಿಸಿದಾಗ ಬೆಚ್ಚಿ ಬಿದ್ದೆ. ನೂರಾರು ತಿಗಣೆಗಳು ಅಲ್ಲಿ ಮನೆ ಮಾಡಿಕೊಂಡಿದ್ದವು ! ಅಷ್ಟು ದಿನ ಕೂತರೂ ತಿಗಣೆಗಳನ್ನು ಗಮನಿಸಿರಲಿಲ್ಲ. ಹೆದರಿ ಹೊರಗಿನ ಬಾಲ್ಕನಿಯಲ್ಲಿ ನಿಲ್ಲಲು ಪ್ರಾರಂಭಿಸಿದೆ.

ನಮ್ಮ ವಕೀಲರು ನನ್ನನ್ನು ನೋಡಿ, ‘ಒಳಗೆ ಕೂತಿರಿ..’ ಎಂದರು. ಅವರಿಗೆ ತಿಗಣೆಗಳ ಬಗ್ಗೆ ಹೇಳಿದೆ. ಅವರು ಒಳಗೆ ಹೋಗಿ ನೋಡಿ, ‘ಯಪ್ಪಾ...!’ ಎಂದರು. ಮೂವತ್ತನೆಯ ಸಲವೂ ಬಂದೆ. ನಟರಾಜ್ ಬಂದರು. ಅವರ ವಕೀಲರು ಊರಲ್ಲಿಲ್ಲ ಎಂದು ಕೋರ್ಟಿಗೆ ತಿಳಿಸಿದರು. ನಮ್ಮ ವಕೀಲರು ನ್ಯಾಯಾಧೀಶರ ಎದುರು ಜೋರಾಗಿ ಮಾತನಾಡಿದರು, ‘ಮೊದಲ ಸಲ ಹಿಯರಿಂಗ್ ಅಂತ ನನ್ನ ಕಕ್ಷಿದಾರರು ಬಂದರು. ಇಪ್ಪತ್ತೊಂಭತ್ತು ಸಲ ಕ್ರಾಸ್ ಎಕ್ಸಾಂಗಾಗಿ ಕೋರ್ಟಿಗೆ ಬಂದಿದ್ದಾರೆ... ಹಣ ಎಷ್ಟು ಖರ್ಚು ? ಸಮಯ ಎಷ್ಟು ವ್ಯರ್ಥ ? ನ್ಯಾಯಾಲಯದ ಬೆಂಚಿನ ಮೇಲೆ ಕೂರುವದಕ್ಕೂ ಆಗದೆ ನಿಂತಿರಬೇಕಾದ್ದರಿಂದ ನನ್ನ ಕಕ್ಷಿದಾರರಿಗೆ ಮಾನಸಿಕ ಹಿಂಸೆ ಒಂದೇ ಅಲ್ಲ, ದೈಹಿಕ ಹಿಂಸೆಯೂ ಆಗಿದೆ’

‘ಬೆಂಚಿನ ಮೇಲೆ ಕೂತುಕೊಳ್ಳುವದಕ್ಕೆ ಯಾರೂ ತಡೆದಿಲ್ಲವಲ್ಲ ?’ ನ್ಯಾಯಾಧೀಶರ ಪ್ರಶ್ನೆ. ‘ಗೊತ್ತಿಲ್ಲದೆ ಮೊದಲೂ ನನ್ನ ಕಕ್ಷಿದಾರರು ಕೂತಿದ್ದಾರೆ... ಸಂದು ಸಂದುಗಳಲ್ಲಿ ರಾಶಿ ತಿಗಣೆಗಳನ್ನು ಕಂಡರೆ ಯಾರು ತಾನೆ ಕೂರಲು ಧೈರ್ಯ ಮಾಡುತ್ತಾರೆ ಯುವರ್ ಆನರ್...? ವಕೀಲರ ಉತ್ತರ. ತಿಗಣೆಗಳನ್ನು ನೋಡಿ ಬರಲು ಗುಮಾಸ್ತರಿಗೆ ನ್ಯಾಯಾಧೀಶರು ಸೂಚಿಸಿದರು. ನಮ್ಮ ವಕೀಲರೆ ಹೋಗಿ ತೋರಿಸಿದಾಗ ಅವರೂ ಹೌಹಾರಿದರು.

‘ತಿಗಣೆ ನಾಶಪಡಿಸಲು ಔಷಧ ಸಿಂಪಡಿಸಲು ಕ್ರಮಕೈಗೊಳ್ಳಿ. ನ್ಯಾಯಾಲಯ ಗಳು ಮಾನಸಿಕವಾಗಿ ರಕ್ತ ಹೀರುತ್ತವೆ ಅನ್ನುವ ಆಪಾದನೆ ಇದ್ದೇ ಇದೆ. ದೈಹಿಕವಾಗಿಯೂ ರಕ್ತ ಹೀರುತ್ತವೆ ಎನ್ನುವ ಆರೋಪ ಬರುವದು ಬೇಡ’ ಎಂದರು ನ್ಯಾಯಾಧೀಶರು. ತಮ್ಮ ಮಾತು ಮುಂದುವರೆಸುತ್ತ, ‘ಮುಂದಿನ ವಾಯಿದೆಯಲ್ಲಿ ಕ್ರಾಸ್ ಎಕ್ಸಾಂ ಮಾಡದಿದ್ದರೆ ಕೇಸ್ ವಜಾ ಮಾಡಲಾಗುವದು.. ನಿಮ್ಮ ವಕೀಲರಿಗೆ ತಿಳಿಸಿ’ ನಟರಾಜರಿಗೆ ಹೇಳಿದರು. ನಟರಾಜ್ ತಲೆ ಅಲ್ಲಾಡಿಸಿದರು. ಮೂವತ್ತೊಂದನೆಯ ಸಲ ಕೋರ್ಟಿಗೆ ಹಾಜರಾದೆ. ನಟರಾಜರ ವಕೀಲರು ಮುಂದೆ ಬಂದು, ‘ಹದಿನೈದು ನಿಮಿಷಗಳ ನಂತರ ಕ್ರಾಸ್ ಎಕ್ಸಾಮ್ ಮಾಡುತ್ತೇನೆ...’ ಎಂದರು. ತಿಗಣೆಗಳು ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ನಾನು ಬೆಂಚಿನ ಮೇಲೆ ಕೂತೆ. ಯುವ ವಕೀಲರಿಬ್ಬರು ಬಾಲ್ಕನಿಯಲ್ಲಿ ನಿಂತು ಮಾತನಾಡಿಕೊಳ್ಳುತ್ತಿದ್ದರು. ನಮ್ಮ ಕೇಸಿನ ಬಗ್ಗೆ ಇರಬಹುದು ಎಂದುಕೊಂಡೆ. ಸುಮಾರು ಇಪ್ಪತ್ತು ನಿಮಿಷಗಳ ನಂತರ ನನ್ನನ್ನು ಕರೆದು ಕಟಕಟೆಯಲ್ಲಿ ನಿಲ್ಲಲು ಸೂಚಿಸಿದರು. ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿಸಿಯೂ ಆಯಿತು. ನಟರಾಜರ ವಕೀಲರು ನನ್ನ ಹೆಸರು ಕೇಳಿದರು. ನಾನು ಹೇಳಿದೆ.

ವಕೀಲರ ಮೊದಲ ಪ್ರಶ್ನೆ, ‘ನಿಮ್ಮ ಸಂಸ್ಥೆಯಲ್ಲಿ ತಯಾರಾಗುವ ಕರಕುಶಲ ವಸ್ತುಗಳನ್ನು ಮಾರುತ್ತೀರಾ...?’

‘ಹೌದು...’ ಎಂದೆ ನಾನು.

ಕೆ.ಪಿ.ಜೆ. ಪ್ರಭು ಅವರಿಗೆ ಎಷ್ಟು ಕಮೀಶನ್ ಕೊಡ್ತೀರಾ...?’ ವಕೀಲರ ಪ್ರಶ್ನೆ.

ಮಧ್ಯದಲ್ಲಿಯೇ ನ್ಯಾಯಾಧೀಶರು ಹೇಳಿದರು, ‘ವಕೀಲರೆ... ನಿಮ್ಮನ್ನು ನೋಡಿದರೆ ಈಗಷ್ಟೆ ಕಾನೂನು ಪರೀಕ್ಷೆ ಪಾಸಾಗಿ ಬಂದವರಂತೆ ಅನಿಸುತ್ತದೆ... ಬ್ಯಾಂಕಿನವರು ಕೆ.ಪಿ.ಜೆ.ಪ್ರಭು ಹೆಸರಿನಲ್ಲಿ ಟ್ರಸ್ಟ್ ಮಾಡಿ ಈ ಸಂಸ್ಥೆ ನಡೆಸುತ್ತಿದ್ದಾರೆ...’

‘ಅವರ ಹೆಸರನ್ನು ಬಳಸಿದ್ದಕ್ಕೆ ಬ್ಯಾಂಕಿನವರು ಅವರಿಗೆ ಗೌರವ ಧನ ನೀಡಿರಲೇಬೇಕು... ಅದೇ ನನ್ನ ಮುಂದಿನ ವಾದದ ವಿಷಯವೂ ಆಗಿರುತ್ತದೆ ಯುವರ್ ಆನರ್...’ ವಕೀಲರ ಉತ್ತರ.

‘ಗೌರವ ಧನ ಪ್ರಭು ಅವರಿಗೆ ಹೇಗೆ ಕೊಡಲು ಸಾಧ್ಯ..? ಕೆ ಪಿ ಜೆ ಪ್ರಭು ಅವರು ಕೆನರಾ ಬ್ಯಾಂಕಿನಲ್ಲಿ ಅಧ್ಯಕ್ಷರಾಗಿ ದೊಡ್ಡ ಹೆಸರು ಮಾಡಿದವರು... ಅದೂ ಅಲ್ಲದೆ ಅವರು ತೀರಿಹೋಗಿ ಹತ್ತಾರು ವರ್ಷಗಳೇ ಆಗಿವೆ... ತೀರಿಹೋದವರು ಗೌರವ ಧನ ಸ್ವೀಕರಿಸಲು ಸಾಧ್ಯ ಇದೆಯಾ...? ಕೇಸಿನ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿಕೊಂಡು ನ್ಯಾಯಾಲಯಕ್ಕೆ ಬನ್ನಿ... ಇಲ್ಲಿಗೆ ಬಂದ ಮೇಲೆ ಕೇಸನ್ನು ಅಭ್ಯಸಿಸಲು ಪ್ರಯತ್ನ ಮಾಡಬೇಡಿ... ಹಾಗೆ ಮಾಡಿದರೆ ನೀವು ಬೆಳೆಯಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಿ... ಮುಂದುವರೆಸಿ...’ ಗರಂ ಆಗಿಯೇ ಹೇಳಿದರು ನ್ಯಾಯಾಧೀಶರು.

ವಕೀಲರು ಬೆವರುತ್ತಿದ್ದರು. ‘ದೆಟ್ ಈಸ್ ಆಲ್ ಯುವರ್ ಆನರ್...’ ಎಂದು ಕ್ರಾಸ್ ಎಕ್ಸಾಂ ಮುಗಿಸಿಬಿಟ್ಟರು. ನಟರಾಜ್ ತಲೆ ಮೇಲೆ ಕೈ ಹೊತ್ತು ಕೂತಿದ್ದನ್ನು ಗಮನಿಸಿದೆ.

ಕೇಸ್ ಬ್ಯಾಂಕಿನ ಪರ ಆಯಿತು. ಆ ವಿಷಯ ಮರೆಯಬಹುದು. ಆದರೆ ತಿಗಣೆ ಎಂಬ ಶಬ್ದ ಕೇಳಿದಾಗ ಅಥವಾ ಓದಿದಾಗ ಈಗಲೂ ಕೋರ್ಟ್ ನೆನಪಾಗುತ್ತದೆ.

? ನರಸಿಂಹ ಹೆಗಡೆ, (ನಿವೃತ್ತ ಬ್ಯಾಂಕ್ ಉದ್ಯೋಗಿ)

ಬೆಂಗಳೂರು. ಮೊ : 9449060077