ಮಡಿಕೇರಿ, ಏ. 5: ಕೊರೊನಾಗೆ ಸಂಬಂಧಿಸಿದಂತೆ, ಕೊರೊನಾ ವೈರಸ್ಸನ್ನು ನಿಯಂತ್ರಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಕೊರೊನಾ ವೈರಸ್ ಸಂಬಂಧ ಯಾವುದೇ ತಪ್ಪು ಮಾಹಿತಿ ಅಥವಾ ಯಾವುದೇ ಒಂದು ಕೋಮಿನ ಬಗ್ಗೆ ಪರ-ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಮೂಲಕವಾಗಲಿ ಅಥವಾ ಧ್ವನಿಸುರುಳಿಯ ಮೂಲಕವಾಗಲಿ ಮಾಹಿತಿಗಳನ್ನು ಹರಿಯ ಬಿಡುವುದು, ಶಿಕ್ಷಾರ್ಹ ಅಪರಾಧವಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ (ಮೊದಲ ಪುಟದಿಂದ) ಮತ್ತು ಇತರೆ ಮಾಧ್ಯಮಗಳಲ್ಲಿ ಯಾವುದೇ ಕೋಮಿನ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹರಡಲು ಪ್ರಯತ್ನಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ಉಂಟುಮಾಡಿದರೆ ಅಂತಹವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಹಾಗೂ ಸ್ಥಳೀಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.