ಕಣಿವೆ, ಏ. 5: ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಮಾಡುವ ಸಮಯವಾಗಿರುತ್ತದೆ. ಆದರೆ ಈ ಬಾರಿ ಮನುಕುಲದ ಮೇಲೆ ಅಪ್ಪಳಿಸಿದ ಮಾರಿ ಕೊರೊನಾ ದಿಂದಾಗಿ ಶುಂಠಿ ಬಿತ್ತನೆಗೂ ಹೆಚ್ಚಿನ ಪ್ರಮಾಣದಲ್ಲಿ ತೊಡಕುಂಟಾಗಿದೆ. ಅಂದರೆ ಈ ಶುಂಠಿಯ ಬಿತ್ತನೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರ ಅಗತ್ಯವಿರುವುದರಿಂದ ಭಾರತ ಲಾಕ್‍ಡೌನ್‍ನಿಂದಾಗಿ ಕಾರ್ಮಿಕರನ್ನು ಸಾಗಿಸುವ ವಾಹನಗಳು ರಸ್ತೆಗಿಳಿಯದ ಕಾರಣ ಇದು ಶುಂಠಿ ಬಿತ್ತನೆಯ ಮೇಲೂ ದುಷ್ಪರಿಣಾಮ ಬೀರಿದೆ.
ಈಗಾಗಲೇ ಗ್ರಾಮೀಣ ಪ್ರದೇಶಗಳ ರೈತರು ಸ್ಥಳೀಯವಾಗಿ ಲಭ್ಯರಾಗುವ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಶುಂಠಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ ಬೃಹತ್ ಪ್ರಮಾಣದಲ್ಲಿ ಅಂದರೆ ನೂರಾರು ಎಕರೆ ಜಮೀನನ್ನು ಗೇಣಿಗೆ ಪಡೆದು ಶುಂಠಿ ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದ ಬಂಡವಾಳಶಾಹಿಗಳಿಗೆ ಈ ಬಾರೀ ಕೊರೊನಾ ಕಂಟಕವಾಗಿದೆ. ಶುಂಠಿ ಬಿತ್ತನೆ ಮಾಡುವ ಹೊಲಕ್ಕೆ ನಿತ್ಯದ ನೀರಾವರಿ ರೂಪಿಸುವ ಮೈಕ್ರೋ ವ್ಯವಸ್ಥೆ ಮಾಡಲು ಪೈಪ್ ಸಂಬಂಧಿತ ಪರಿಕರಗಳು ಹಾಗೂ ರಸಗೊಬ್ಬರ ಮೊದಲಾದ ಪರಿಕರಗಳನ್ನು ಖರೀದಿಸಬೇಕಿದ್ದ ಬೆಳೆಗಾರರನ್ನು ಲಾಕ್‍ಡೌನ್ ಈ ಬಾರಿ ಲಾಕ್ ಮಾಡಿಬಿಟ್ಟಿದೆ. ಶುಂಠಿ ಬಿತ್ತನೆಗೆ ಏಪ್ರಿಲ್ ನಂತರದ ದಿನಗಳು ಅಷ್ಟಾಗಿ ಪೂರಕವಾಗದ ಕಾರಣ ಈ ಬಾರೀ ಶುಂಠಿ ಬೆಳೆಯ ಫಸಲಿನಲ್ಲಿ ಏರಿಳಿತವಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಕೆ.ಆರ್. ನಗರ, ಹೊಳೆನರಸೀಪುರ, ಅರಕಲಗೂಡು ತಾಲೂಕಿನ ಅನೇಕ ಗ್ರಾಮಗಳಲ್ಲಿ ನೂರಾರು ಎಕರೆ ಭೂಮಿಯನ್ನು ಗ್ರಾಮಗಳ ರೈತರಿಂದ ಸಾಮೂಹಿಕ ವಾಗಿ ಲೀಸ್‍ಗೆ ಪಡೆದು ಶುಂಠಿ ಬಿತ್ತನೆ ಮಾಡಲು ಕೇರಳಿಗರು ಈ ಬಾರಿ ಮುಂದಾಗಿದ್ದರು. ದುರದೃಷ್ಟವಶಾತ್ ಕೊರೊನಾ ಕೇರಳದಲ್ಲಿ ಹೆಚ್ಚು ನರ್ತನ ಮಾಡಿದ್ದರಿಂದಾಗಿ ಕೇರಳದಿಂದ ಕರ್ನಾಟಕಕ್ಕೆ ಸಂಪರ್ಕಿಸುವ ಎಲ್ಲಾ ಗಡಿಗಳು ಬಂದ್ ಆಗಿರುವುದರಿಂದ ಬೆಳೆಗಾರರು ಇಲ್ಲಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಒಂದು ಅಂಶವಾದರೆ, ಆ ಬೆಳೆಗಾರ ಮಂದಿಯನ್ನು ತಮ್ಮೂರಿಗೆ ಸೇರಿಸದಿರಲು ಭೂಮಿಯನ್ನು ಲೀಸ್ ಕೊಟ್ಟ ಗ್ರಾಮಗಳ ಜನರು ತೀರ್ಮಾನಿಸಿರುವುದು ಶುಂಠಿ ಬೆಳೆಯಲು ಮಹಾ ಕಂಟಕವೇ ಎದುರಾಗಿರುವ ಮತ್ತೊಂದು ಅಂಶವೆನ್ನಲಾಗಿದೆ. ಕೇರಳದವರಿಂದ ಕೊರೊನಾ ಕರ್ನಾಟಕದ ಗ್ರಾಮಗಳಿಗೆ ಹರಡುವ ಭೀತಿಯಿಂದ ಈ ಬಾರಿ ಶುಂಠಿ ಬೆಳೆಯದಿದ್ದರೂ ಚಿಂತೆಯಿಲ್ಲ. ಮುಂದಿನ ಬಾರಿ ನೋಡೋಣ ಎಂಬ ತೀರ್ಮಾನಕ್ಕೆ ಗ್ರಾಮಗಳ ಜನರು ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಬೇಸಿಗೆಯ ಬಿಸಿಲು ಧರೆಯನ್ನು ಸುಡುತ್ತಿದ್ದು, ಶುಂಠಿ ಬಿತ್ತನೆ ಮಾಡಿರುವ ಭೂಮಿಗೆ ಮಳೆಯ ಅಗತ್ಯ ತುರ್ತು ಅನಿವಾರ್ಯವಾಗಿದೆ. ಕೊಳವೆ ಬಾವಿ ಹಾಗೂ ಕಾವೇರಿ ನದಿಯಿಂದ ನಿತ್ಯವೂ ನೀರನ್ನು ಶುಂಠಿ ಭೂಮಿಗೆ ಹರಿಸುತ್ತಿದ್ದರೂ ಕೂಡ ಸುಡುವ ಬಿಸಿಲಿಗೆ ಕ್ಷಣಾರ್ಧದಲ್ಲಿ ಕಾವು ಏರುತ್ತಿದೆ. ಯುಗಾದಿ ಹಬ್ಬ ಕಳೆದ ಬಳಿಕ ಇಷ್ಟರಲ್ಲಿ ಮೂರ್ನಾಲ್ಕು ಮಳೆ ಕುಶಾಲನಗರ ಭಾಗದಲ್ಲಿ ಸುರಿಯ ಬೇಕಿತ್ತಾದರೂ ಯಾಕೋ ಏನೋ ಈ ಬಾರಿ ವರುಣನೂ ಈ ಭಾಗದಲ್ಲಿ ಮುನಿಸಿರುವಂತಿದೆ.
- ಕೆ.ಎಸ್. ಮೂರ್ತಿ