ರೈಲ್ವೆ ವಾರ್ಡ್ : 40 ಸಾವಿರ ಮಂದಿಗೆ ಚಿಕಿತ್ಸೆ
ನವದೆಹಲಿ, ಏ.6 : ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಮಹತ್ತರ ಸಾಧನೆ ಮಾಡಿದೆ. ಲಾಕ್ ಡೌನ್ ಘೋಷಣೆಯಾದ 10 ದಿನಗಳಲ್ಲಿ ರೈಲ್ವೆ ಇಲಾಖೆ 2,500 ರೈಲು ಬೋಗಿಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸಿದ್ದು, ಸರಿಸುಮಾರು 40 ಸಾವಿರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾದ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಿದ್ಧಗೊಳಿಸಿದೆ. ರೈಲ್ವೆ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ 5,000 ಕೋಚ್ ಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಯೋಜನೆ ಇದೆ. ಮಾನವ ಸಂಪನ್ಮೂಲ ಇಲ್ಲದೇ ಇರುವ ಸಂಕಷ್ಟದ ಸ್ಥಿತಿಯಲ್ಲೂ ರೈಲ್ವೆ ಇಲಾಖೆ ಅಸಾಧ್ಯವಾದ ಕೆಲಸವನ್ನು ಕೇವಲ 10 ದಿನಗಳಲ್ಲಿ ಪೂರ್ಣಗೊಳಿಸಿದೆ. 2,500 ಬೋಗಿಗಳನ್ನು ವೈದ್ಯಕೀಯ ಮಾನದಂಡದ ಪ್ರಕಾರ ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತಿಸುವ ಮೂಲಕ 40,000 ಐಸೋಲೇಷನ್ ಬೆಡ್ಗಳನ್ನು ಸೃಷ್ಟಿಸಲಾಗಿದೆ. ಈಗ ಎಂತಹ ಸವಾಲಿನ ಪರಿಸ್ಥಿತಿ ಎದುರಿಸುವುದಕ್ಕೂ ಭಾರತ ಸಜ್ಜಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತಕ್ಕೆ 2.9 ಮಿಲಿಯನ್ ನೆರವು
ನವದೆಹಲಿ, ಏ.6 : ಕೊರೊನಾ ವೈರಸ್ ನಿಗ್ರಹಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿರುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ 2.9 ಮಿಲಿಯನ್ ಮೊತ್ತದ ನೆರವಿನ ಪ್ಯಾಕೇಜ್ನ್ನು ಅಮೇರಿಕ ಕೊಡುಗೆಯಾಗಿ ನೀಡಿದೆ. ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾ ಏಜೆನ್ಸಿ ಮೂಲಕ 2. 9 ಬಿಲಿಯನ್ ಡಾಲರ್ ಮೊತ್ತದ ನೆರವನ್ನು ನೀಡುವುದಾಗಿ ಅಮೆರಿಕಾ ಸರ್ಕಾರ ಮಾರ್ಚ್ 28 ರಂದು ಘೋಷಿಸಿತ್ತು. ಕಳೆದ 20 ವರ್ಷಗಳಲ್ಲಿ ಅಮೆರಿಕಾ ಭಾರತಕ್ಕೆ ಒದಗಿಸಿದ 1. 4 ಬಿಲಿಯನ್ ಡಾಲರ್ ಮೊತ್ತದ ಆರೋಗ್ಯ ನೆರವು ಮತ್ತು ಒಟ್ಟಾರೇ ಸುಮಾರು 3 ಬಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ಉಭಯ ರಾಷ್ಟ್ರಗಳ ನಡುವೆ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಭಾರತದಲ್ಲಿನ ಅಮೆರಿಕಾದ ರಾಯಬಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ನಿಧಿಯಿಂದ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಭಾರತಕ್ಕೆ ನೆರವಾಗಲಿದೆ. ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಲು ಮತ್ತು ರೋಗ ನಿಯಂತ್ರಣ ನಿಟ್ಟಿನಲ್ಲಿ ಅಗತ್ಯ ಸಾಧನ ಸಲಕರಣೆಗಳ ಪೂರೈಕೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಂಸದರ 1 ವರ್ಷದ ವೇತನ ಕಡಿತ
ನವದೆಹಲಿ, ಏ.6 : ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ, ಕೇಂದ್ರ ಸಚಿವ ಹಾಗೂ ಸಂಸದರ ಒಂದು ವರ್ಷದ ವೇತನ, ಪಿಂಚಣಿ ಮತ್ತು ಭತ್ಯೆಯನ್ನು ಶೇ.30ರಷ್ಟು ಕಡಿತಗೊಳಿಸಲು ಕೇಂದ್ರ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಹಾಗೂ ಇದರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಸಂಸದರ ಒಂದು ವರ್ಷದ ವೇತನ, ಪಿಂಚಣಿ ಮತ್ತು ಭತ್ಯೆ ಹಾಗೂ ಸಂಸದರ ನಿಧಿಯನ್ನು ಮುಂದಿನ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ಮುಂದಿನ ಎರಡು ವರ್ಷಗಳ ಕಾಲ ಸಂಸದರ ನಿಧಿ ಸ್ಥಗಿತಗೊಳಿಸುವುದರಿಂದ ಸುಮಾರು 7900 ಕೋಟಿ ಹಾಗೂ ಸಂಸದರ ವೇತನ, ಪಿಂಚಣಿ ಮತ್ತು ಭತ್ಯೆಯಲ್ಲಿ ಶೇ. 30ರಷ್ಟು ಕಡಿತಗೊಳಿಸುವುದರಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
26 ನರ್ಸ್ಗಳಿಗೆ ಕೊರೊನಾ ಸೋಂಕು
ಮುಂಬೈ, ಏ.6 : ಮಹಾರಾಷ್ಟ್ರದ ಮುಂಬೈನ ಹೃದಯಭಾಗದಲ್ಲಿರುವ ಖಾಸಗಿ ವೋಕ್ಹಾರ್ಡ್ ಆಸ್ಪತ್ರೆಯ ಮೂವರು ವೈದ್ಯರು ಮತ್ತು 26 ನರ್ಸ್ಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸರ್ಕಾರ ಇಡೀ ಆಸ್ಪತ್ರೆಯನ್ನೇ ಕೋವಿಡ್ ಹಾಟ್ಸ್ಪಾಟ್ ಎಂದು ಘೋಷಣೆ ಮಾಡಿದೆ. ಅಲ್ಲದೆ, ಆಸ್ಪತ್ರೆಯನ್ನು ಸೋಂಕಿತ ಪ್ರದೇಶ ಎಂದು ಪರಿಗಣಿಸಿದ್ದು, ಇಡೀ ಆಸ್ಪತ್ರೆಯನ್ನೇ ಮುಚ್ಚಲಾಗಿದೆ. ಮೂಲಗಳ ಪ್ರಕಾರ ಈ ಆಸ್ಪತ್ರೆಯಲ್ಲಿ 270ಕ್ಕೂ ಅಧಿಕ ನರ್ಸ್ಗಳು ಸೇವೆ ಸಲ್ಲಿಸುತ್ತಿದ್ದು, ಇದೀಗ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ.
ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನ
ಬೆಂಗಳೂರು ಏ.6 : ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್(44) ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಐದು ದಿನಗಳಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ತೇಜಸ್ವಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಗ್ಯಾಸ್ಟಿಕ್ ಸಮಸ್ಯೆಯ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಅವರಿಗೆ ಲಿವರ್ ಹಾಗೂ ಕಿಡ್ನಿ ಸಮಸ್ಯೆ ಕಾಣಿಸಿದ್ದು ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದ್ದವು. ಬುಲೆಟ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದು, ಕಲಾಸಿಪಾಳ್ಯ, 'ಜಾಕಿ', 'ಬೊಂಬಾಯಿ ಮಿಠಾಯಿ', 'ಭೀಷ್ಮ', 'ಮಸ್ತ್ ಮಜಾ ಮಾಡಿ' ಸೇರಿದಂತೆ 325 ಚಿತ್ರಗಳಲ್ಲಿ ನಟಿಸಿದ್ದಾರೆ.