ಕೂಡಿಗೆ, ಏ. 5: ಮಹಿಳೆಯರು ಹೆಚ್ಚಾಗಿ ಸಂಸಾರದ ಜಂಜಾಟ ದೊಂದಿಗೆ ಕಾಲ ಕಳೆಯುತ್ತಾರೆ. ಮಹಿಳೆಯರು ಕೃಷಿಯಲ್ಲಿ ಭಾಗವ ಹಿಸುವುದು ವಿರಳ. ಹೀಗಿರುವಾಗ ಮಹಿಳೆಯೋರ್ವರು ತಮ್ಮ ಕಿಡ್ನಿ ವೈಫಲ್ಯದ ನಡುವೆಯೂ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಮಾದರಿ ರೈತ ಮಹಿಳೆ ಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಶಿರಗೆಜ್ಜೆ ಅಶಿತಾ ಮೋಹನ್ ಎಂಬವರು ತಮ್ಮ 4 ಎಕರೆ ಕೃಷಿ ಭೂಮಿಯಲ್ಲಿ ಸಿಹಿಗೆಣಸು, ಮರಗೆಣಸು ಹಾಗೂ ಸುವರ್ಣ ಗೆಡ್ಡೆಯನ್ನು ಬೆಳೆದಿದ್ದಾರೆ. ಸಂಸಾರದ ಜಂಜಾಟದೊಂದಿಗೆ ಕಳೆದ ಆರು ತಿಂಗಳಿನಿಂದ ಸುಡು ಬೇಸಿಗೆಯ ನಡುವೆಯೂ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಬೆಳೆ ಬೆಳೆದಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ ಒಂದು ಕಿಡ್ನಿಯನ್ನು ಕಳೆದುಕೊಂಡಿ ರುವ ಈ ಮಹಿಳೆ, ಕುಟುಂಬಸ್ಥರ ಸಹಕಾರದೊಂದಿಗೆ ಕೃಷಿಯಲ್ಲಿ ತೊಡಗಿದ್ದರು. ಬಾಲ್ಯದಿಂದಲೂ ಕೃಷಿಯ ಮೇಲಿನ ಪ್ರೀತಿ, ಉತ್ಸಾಹವೇ ಇವರಿಗೆ ಅನಾರೋಗ್ಯದ ಸಮಯದಲ್ಲೂ ಬೇಸಾಯದಲ್ಲಿ ಆಸಕ್ತಿ ತೋರಲು ಕಾರಣವಾಗಿದೆ.

ತನ್ನ ಪತಿ ದಿನಗೂಲಿ ಕೆಲಸಕ್ಕೆ ತೆರಳಲು ಮುಂದಾದ ಮೇಲೆ ಇವರು ಸ್ವತಃ ತಮ್ಮನ್ನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ.

ಬೆಳೆದ ಬೆಳೆ ಮಾರಾಟ ಮಾಡುವ ಸಮಯ ಒದಗಿ ಬಂದು ಒಂದು ತಿಂಗಳು ಕಳೆದಿದ್ದರೂ, ಬೆಳೆ ಗಳು ಮಾರಾಟವಾಗದೇ ಹುಳುಬಿದ್ದು ನಾಶವಾಗಲಾರಂಭಿಸಿವೆ. ನೆರೆ ರಾಜ್ಯ ಕೇರಳದಲ್ಲಿ ಸಿಹಿಗೆಣಸಿಗೆ ಹೆಚ್ಚು ಬೇಡಿಕೆಯಿದ್ದು,

(ಮೊದಲ ಪುಟದಿಂದ) ಕೊರೊನಾ ಹಿನ್ನೆಲೆ ಕೇರಳದ ರಸ್ತೆ ಮಾರ್ಗವನ್ನು ಸ್ಥಗಿತಗೊಳಿಸಿರುವುದರಿಂದ ಸಿಹಿಗೆಣಸು ಮಾರಾಟವಾಗದೇ ಕೊಳೆಯುವ ಸ್ಥಿತಿಗೆ ತಲುಪಿದೆ. ಕೊರೊನಾದಿಂದಾಗಿ ಮರಗೆಣಸು ಹಾಗೂ ಸುವರ್ಣ ಗೆಡ್ಡೆ ಕೂಡಾ ಕೊಳ್ಳುವವರಿಲ್ಲದೇ ಹಾಳಾಗುತ್ತಿವೆ. ಮಾರಾಟವಾಗದೇ ಕೊಳೆಯುತ್ತಿರುವ ಬೆಳೆಗಳನ್ನು ಉಚಿತವಾಗಿ ಕೊಂಡೊಯ್ಯಲು ಕೂಡಾ ಜನರಿಲ್ಲದಂತಾಗಿರುವುದು ಶೋಚನೀಯ. ಬೆಳೆದ ಬೆಳೆಗಳನ್ನು ಜನ ಕೊಂಡೊಯ್ದಿದ್ದಲ್ಲಿ ಕೃಷಿ ಭೂಮಿಯಲ್ಲಿ ಬೇರೆ ಬೆಳೆಯನ್ನಾದರೂ ಬೆಳೆಯಬಹುದಿತ್ತು ಎಂಬುದು ರೈತ ಮಹಿಳೆಯ ಅನಿಸಿಕೆಯಾಗಿದೆ. ಈ ಪ್ರಗತಿಪರ ರೈತ ಮಹಿಳೆ ಬೇಸಾಯ ಮಾಡಲು ಸಹಕಾರ ಸಂಘಗಳ ಮೂಲಕ ರೂ. 3 ಲಕ್ಷಕ್ಕೂ ಅಧಿಕ ಸಾಲ ಮಾಡಿರುವುದಲ್ಲದೇ ಬೇಸಾಯಕ್ಕಾಗಿ ರೂ. 5 ಲಕ್ಷಗಳನ್ನು ಬಳಕೆ ಮಾಡಲಾಗಿದೆ. ಅತ್ತ ಲಕ್ಷಗಟ್ಟಲೇ ಸಾಲ ಮಾಡಿ ಬೆಳೆ ಬೆಳೆದರೇ ಇತ್ತ ಬಂದ ಬೆಳೆಗಳು ಮಾರಾಟವಾಗದೇ ಕೊಳೆಯುತ್ತಿರುವುದು ಈ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಕಷ್ಟದ ದಿನಗಳಲ್ಲಿ ನಷ್ಟವನ್ನನುಭವಿಸುತ್ತಿರುವ ಈ ಬಡ ಕುಟುಂಬಕ್ಕೆ ನೆರವಿನ ಅಗತ್ಯವಿದೆ.

- ಕೆ.ಕೆ. ನಾಗರಾಜಶೆಟ್ಟಿ