ಮಡಿಕೇರಿ, ಏ. 4: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧೀನದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಪ್ರತ್ಯೇಕ ಕೊರೊನಾ ಕೇರ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಶನ್ 2020 ರ ನಿಯಮ 12 ಮತ್ತು 13, ವಿಕೋಪ ನಿರ್ವಹಣಾ ಕಾಯ್ದೆ 2005 ರ ಕಲಂ 65 ರಡಿ ದತ್ತವಾದ ಅಧಿಕಾರದಂತೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಲಾಗಿದ್ದು; ಜಿಲ್ಲಾ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಕೊರೊನಾ ಹೊರತುಪಡಿಸಿ ಉಳಿದ ಚಿಕಿತ್ಸಾ ಸೇವೆಗಳನ್ನು ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ನೀಡಲಾಗುವುದು. ಮೂರು ದಿನ ಇಂಧನ: ಇದರೊಂದಿಗೆ ಜಿಲ್ಲೆಯಲ್ಲಿ ತುರ್ತು ಸೇವೆಯ ವಾಹನಗಳು, ಅಗತ್ಯ ವಸ್ತುಗಳ ಪೂರೈಕೆ ವಾಹನಗಳು, ಸರ್ಕಾರಿ ವಾಹನಗಳು ಮತ್ತು ಕೋವಿಡ್-19 ರ ನಿಗ್ರಹ ಸಂಬಂಧ ನಿಯೋಜಿತ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳ ವಾಹನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ವಾಹನಗಳಿಗೆ ಇಂಧನವನ್ನು ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮಾತ್ರ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಒದಗಿಸಲು ಜಿಲ್ಲೆಯ ಎಲ್ಲಾ ಪೆಟ್ರೋಲ್- ಗ್ಯಾಸ್ ಬಂಕ್ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.