ಸೋಮವಾರಪೇಟೆ, ಏ. 4: ಇಡೀ ದೇಶವೇ ಒಂದಾಗಿ ಎದುರಿಸುತ್ತಿರುವ ಭೀಕರ ಮಹಾ ಮಾರಿ ಕೋವಿಡ್19ನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಇಂದು ನಗರದಲ್ಲಿ ಪಡಿತರ ಚೀಟಿ ಇಲ್ಲದ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ನಂತರ ಕೋವಿಡ್19 ಬಾರದಂತೆ ಔಷಧಿ ಸಿಂಪಡಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 1550 ಮಂದಿ ಪಡಿತರ ಚೀಟಿ ಇಲ್ಲದ ಬಡವರಿಗೆ ಆಹಾರ ಸಾಮಗ್ರಿ ವಿತರಿಸಲಾಗಿದೆ ಎಂದರು.
ಇಡೀ ಜಿಲ್ಲೆಯ ಎಲ್ಲ ಸರ್ಕಾರಿ ಅಧಿಕಾರಿಗಳು(ಮೊದಲ ಪುಟದಿಂದ) ಮತ್ತು ನೌಕರರು ಕೋವಿಡ್19 ವಿರುದ್ದ ಹೋರಾಟದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಜಿಲ್ಲೆಯಲ್ಲಿ ಕೇವಲ ಒಂದು ಪ್ರಕರಣ ದಾಖಲಾಗಿದ್ದು, ಈಗ ಅವರೂ ಕೂಡ ಗುಣಮುಖ ರಾಗುತ್ತಿದ್ದಾರೆ ಎಂದರು.
ಜನತೆಯು ಯಾವುದೇ ರೀತಿಯ ಭಯ ಪಡದೆ ಜಾಗೃತರಾಗಿರಬೇಕು ಎಂದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಸಲಹೆಯಂತೆ ಪ್ರತಿಯೊಬ್ಬರೂ ಭಾನುವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ ಅಗ್ನಿ ದೀಪಗಳನ್ನು ಉರಿಸಬೇಕೆಂದು ಮನವಿ ಮಾಡಿಕೊಂಡರು. ದೀಪ ಹಚ್ಚುವ ಸಂದರ್ಭದಲ್ಲಿ ಯಾರೂ ಸ್ಯಾನಿಟೈಸರ್ ಬಳಸಬೇಡಿ ಎಂದ ಅವರು ಪ್ರತಿ ಗ್ರಾ.ಪಂ. ಮಟ್ಟದಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಮೇ ತಿಂಗಳಿನಲ್ಲಿ ದೇಶದಿಂದಲೇ ನಾಪತ್ತೆ ಆಗಬೇಕು ಎಂದು ಹಾರೈಸಿದರು.
ಈ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ಠಾಣಾಧಿಕಾರಿ ಶಿವಶಂಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯ ಕುಮಾರ್, ಕಂದಾಯ ನಿರೀಕ್ಷಕ ವಿನು ಮುಂತಾದವರು ಹಾಜರಿದ್ದರು.