ಮಡಿಕೇರಿ, ಏ. 4: ಮಡಿಕೇರಿ ನಗರದ ಪೆನ್ಷನ್ ಲೇನ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಒಡಿಸ್ಸಾ ಮೂಲದವರಿಗೆ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಆಹಾರ ಸಾಮಗ್ರಿ ವಿತರಿಸಿದರು.
ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರಿಗೆ ಪಡಿತರವನ್ನು ವಿತರಿಸಲಾಗುತ್ತಿದೆ.
ಒಡಿಸ್ಸಾ ಮೂಲದ 5 ಜನ ಮತ್ತು ಹುಬ್ಬಳ್ಳಿಯ ಒಬ್ಬರು ಸೇರಿದಂತೆ ಒಟ್ಟು 6 ಜನ ಹಾಗೂ ಕಾನ್ವೆಂಟ್ ಜಂಕ್ಷನ್‍ನಲ್ಲಿ ಖಾಲಿ ಜಾಗದಲ್ಲಿ ಶೆಡ್‍ನಲ್ಲಿ ವಾಸವಿರುವ ಬೇಲೂರಿನ 2 ಕಟ್ಟಡ ಕಾರ್ಮಿಕರು ಮತ್ತು 2 ಮಕ್ಕಳು ಸೇರಿ ಒಟ್ಟು 4 ಜನ ಸೇರಿದಂತೆ ಒಟ್ಟಾರೆಯಾಗಿ 10 ಜನ ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.
ಸೋಮವಾರಪೇಟೆ ತಾಲೂಕಿನ ಮುಳ್ಳುಸೂಗೆ ಗ್ರಾಮದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಉತ್ತರ ಪ್ರದೇಶದ 13 ಮತ್ತು ಮಧ್ಯಪ್ರದೇಶದ 9 ಜನ ಸೇರಿದಂತೆ ಒಟ್ಟು 22 ಜನ ಟೈಲ್ಸ್ ಪಾಲೀಶ್ ಮತ್ತು ಫರ್ನಿಚರ್ ಕೆಲಸ ನಿರ್ವಹಿಸುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ಶುಕ್ರವಾರ ಕುಶಾಲನಗರದ ಕೋವಿಡ್-19 ನೋಡಲ್ ಅಧಿಕಾರಿ ವಿರುಪಾಕ್ಷ ಅವರು ವಿತರಿಸಿದರು.
ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಮ್.ಎಮ್. ಯತ್ನಟ್ಟಿ, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಬಿ.ಕೆ. ರವೀಂದ್ರ ರೈ ಮತ್ತು ಕಾರ್ಯದರ್ಶಿಯಾದ ಮುರಳೀಧರ್ ರಾವ್ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಚಂದ್ರ ಮತ್ತು ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಕೃಷ್ಣ ಎಮ್. ಇತರರು ಇದ್ದರು.