ವೀರಾಜಪೇಟೆ, ಏ. 4: ಹೊರ ರಾಜ್ಯಗಳಿಂದ ಬಂದು ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ನಿರ್ಗತಿಕರಾದ ನೈಜ ಕಾರ್ಮಿಕರಿಗೆ ಮಾತ್ರ ಪಡಿತರ ಕಿಟ್‍ಗಳನ್ನು ವಿತರಿಸಬೇಕು. ಯಾವುದೇ ಕಾರಣಕ್ಕೂ ಸರಕಾರದ ಸೌಲಭ್ಯಗಳು ದುರುಪಯೋಗವಾಗದಂತೆ ಅಧಿಕಾರಿ ಗಳು ಮುತುವರ್ಜಿ ವಹಿಸಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧಿಕಾರಿಗಳಿಗೆ ಎಚ್ಚರಿಸಿದರು. ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಹೊರ ರಾಜ್ಯದಿಂದ ಬಂದ ಕಾರ್ಮಿ ಕರಿಗೆ ಇಂದು ಪಡಿತರ ಸಾಮಗ್ರಿಗಳ ಕಿಟ್ ವಿತರಿಸಿದ ಬೋಪಯ್ಯ ಅವರು ತೋಟದ ಮಾಲೀಕರ ಆಶ್ರಯದಲ್ಲಿ ಕಾಫಿ ತೋಟದಲ್ಲಿ ಹಾಗೂ ಕಟ್ಟಡಗಳಲ್ಲಿ ದುಡಿದು ಉಚಿತ ಪಡಿತರ ಕಿಟ್‍ಗಾಗಿ ತಾಲೂಕು ಕಚೇರಿಯಲ್ಲಿ ಅಂಗಲಾಚುವುದು ಬೇಡ. ಇಂತಹವರಿಗೆ ಪಡಿತರ ಕಿಟ್ ವಿತರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ವೀರಾಜಪೇಟೆ ವಲಯ ಕಾರ್ಮಿಕ ಕಚೇರಿಯ ಅಧಿಕಾರಿಯ ಪರವಾಗಿ ಪಡಿತರ ಕಿಟ್ ವಿತರಣೆಯಲ್ಲಿ ಭಾಗವಹಿಸಿದ್ದ ಮಂಜುನಾಥ್ ಅವರನ್ನು ನೈಜ ಕಾರ್ಮಿಕ ಫಲಾನುಭವಿ ಕಾರ್ಮಿಕರ ಪಟ್ಟಿಯನ್ನು ಸಿದ್ಧಪಡಿಸಿದ್ದೀರಾ ಎಂದು ಕೇಳಿದಾಗ ಮಂಜುನಾಥ್ ತಮಗೇನು ತಿಳಿದಿಲ್ಲ ಎಂಬ ಉತ್ತರ ನೀಡಿದರು. ನಂತರ ಶಾಸಕ ಬೋಪಯ್ಯ ಅವರು ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಜನರು ಕಂಗಾಲಾಗಿದ್ದರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿ ರುವ ಕಾರ್ಮಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಹೊರ ರಾಜ್ಯ, ಜಿಲ್ಲೆಯಿಂದ ಬಂದವರನ್ನು ಗುರುತಿಸಿ ಅದರಲ್ಲಿ ಫಲಾನುಭವಿ ಗಳನ್ನು ಆಯ್ಕೆ ಮಾಡಿ ಸರಕಾರದ ಸೌಲಭ್ಯಗಳನ್ನು ನೀಡುವಂತೆ ಬೋಪಯ್ಯ ಅವರು ಕಾರ್ಮಿಕ ಅಧಿಕಾರಿಗೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಕೆ.ಎಸ್.ನಂದೀಶ್, ನೋಡಲ್ ಅಧಿಕಾರಿ ಎ.ಬಿ.ತಿಮ್ಮಯ್ಯ, ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸಹಾಯಕ ಅಭಿಯಂತರ ಎನ್.ಪಿ. ಹೇಮ್‍ಕುಮಾರ್, ಡಿ.ವೈಎಸ್‍ಪಿ ಸಿ.ಟಿ. ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಎಂ. ಮಧುದೇವಯ್ಯ ಆರ್.ಎಂ.ಸಿ. ಮಾಜಿ ಅಧ್ಯಕ್ಷ ಸುವಿನ್ ಗಣಪತಿ,ಪಟ್ಟಣ ಪಂಚಾಯಿತಿ ಸದಸ್ಯರುಗಳು, ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.
ಸುಮಾರು 20ಮಂದಿ ನಿರ್ಗತಿಕ ಕಾರ್ಮಿಕರಿಗೆ ಪಡಿತರ ಕಿಟ್‍ಗಳನ್ನು ವಿತರಿಸಲಾಯಿತು.