ಕುಶಾಲನಗರ, ಏ. 4: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಾಕ್‍ಡೌನ್ ಹಿನ್ನೆಲೆ ಕುಶಾಲನಗರ ಪಟ್ಟಣದ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಬಂದ್ ಆಗುವುದರೊಂದಿಗೆ ಜನಜೀವನ ಸ್ತಬ್ಧಗೊಂಡಿದೆ. ಇದರೊಂದಿಗೆ ಸರಕಾರಿ ಬಸ್ ನಿಲ್ದಾಣದ ಆವರಣ ದಲ್ಲಿ ದಿನನಿತ್ಯ ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳು ಕೂಡ ನೀರು ಆಹಾರಕ್ಕಾಗಿ ಪರಿತಪಿಸುತ್ತಿರುವದು ಗೋಚರಿಸಿದೆ.
ಕುಶಾಲನಗರ ಬಸ್ ನಿಲ್ದಾಣದ ಆವರಣದಲ್ಲಿರುವ ಮರಗಿಡಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಪಕ್ಷಿಗಳ ಗುಂಪೊಂದು ವಲಸೆ ಬಂದು ವಂಶಾಭಿವೃದ್ಧಿ ಮಾಡುವ ಕಾಯಕದಲ್ಲಿ ಕಳೆದ 3 ತಿಂಗಳಿನಿಂದ ನೆಲೆಕಂಡಿದೆ. ಮರಗಳಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ಗೂಡು ಗಳನ್ನು ಕಟ್ಟಿಕೊಂಡು ತಮ್ಮ 100ಕ್ಕೂ ಅಧಿಕ ಮರಿಗಳೊಂದಿಗೆ ವಾಸವಾಗಿದ್ದು ಚಿಲಿಪಿಲಿಗುಟ್ಟುತ್ತಿವೆ. ಸ್ವಲ್ಪ ದಿನಗಳ ನಂತರ ತಮ್ಮ ಮೂಲಸ್ಥಾನಕ್ಕೆ ಹಾರಿಹೋಗುವುದು ಈ ಪಕ್ಷಿಗಳ ಜೀವನ ಶೈಲಿಯಾಗಿದೆ.
ಸನಿಹದಲ್ಲೇ ಇದ್ದ ಚರಂಡಿ ಮತ್ತಿತರ ಪ್ರದೇಶಗಳಲ್ಲಿ ಹುಳಹುಪ್ಪಟೆ ಗಳನ್ನು ಹಿಡಿದು ತಮ್ಮ ಹೊಟ್ಟೆ ಹೊರೆಯುವುದರೊಂದಿಗೆ ತಮ್ಮ ಆರೈಕೆ ಕೂಡ ನಡೆಯುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡ ಹಿನ್ನಲೆ ಈ ಪಕ್ಷಿಗಳಿಗೆ ಆಹಾರ ಸಂಗ್ರಹಕ್ಕೆ ಬರ ಉಂಟಾಗಿದೆ.
ಇದನ್ನರಿತು ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖ ಚಂದ್ರಮೋಹನ್, ನಿಡ್ಯಮಲೆ ದಿನೇಶ್ ಮತ್ತು ಕಾರ್ಯಕರ್ತರು ಸೇರಿ ಪಕ್ಷಿಗಳ ಗೂಡಿನ ಬಳಿ ಮರದ ಮೇಲೆ ಚಿಕ್ಕಪುಟ್ಟ ಬಕೆಟ್‍ಗಳಲ್ಲಿ ನೀರು ತುಂಬಿಸಿ ಅಕ್ಕಿ ಕಾಳುಗಳನ್ನು ಇಟ್ಟು ಪಕ್ಷಿಗಳ ಆಹಾರ ಕೊರತೆಯನ್ನು ನೀಗಿಸುವ ಯತ್ನ ನಡೆಸಿದ್ದಾರೆ. -ಸಿಂಚು