ಮಡಿಕೇರಿ, ಏ. 4: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾ.5ರಂದು ದೇಶದ 130 ಕೋಟಿ ಜನತೆ ಕತ್ತಲೆ ಓಡಿಸಿ ಬೆಳಕಿನೆಡೆಗೆ ತೆರಳುವ ಸಂಕಲ್ಪ ದೊಂದಿಗೆ, ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ಎದುರಾಗಿರುವ ಕೊರೊನಾ ಕಂಟಕ ತೊಡೆದು ಹಾಕಲು ಕರೆನೀಡಿರುವದು ಅದೆಷ್ಟು ಸಂದರ್ಭೋಚಿತ ಎಂದು ಮನುಷ್ಯಮಾತ್ರರಾದ ನಾವು ಒಮ್ಮೆ ಯೋಚಿಸುವದು ಅತ್ಯಗತ್ಯ. ಕಾರಣ ಈ ನಮ್ಮ ದೇಶವನ್ನು ವಿಶ್ವದ ತೊಟ್ಟಿಲು ಎಂದು ದಾರ್ಶನಿಕರು ಕರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ತಾ.5 (ಇಂದು)ರಂದು ಚೈತ್ರ ಮಾಸದ ಪ್ರದೋಷ ಕಾಲದಲ್ಲಿ ರಾತ್ರಿ ವೇಳೆ 9ಗಂಟೆಯಿಂದ 9 ನಿಮಿಷದವರೆಗೆ ದೇಶದ ಜನಕೋಟಿ ತಮ್ಮ ತಮ್ಮ ಮನೆಗಳ ಮುಂದೆ ದೀಪ, ಮೇಣದಬತ್ತಿ,ಟಾರ್ಚ್,ಮೊಬೈಲ್ ಬೆಳಗುವಂತೆ ಕರೆ ನೀಡಲಾಗಿದೆ.

ಇಲ್ಲಿ ಮನುಕುಲಕ್ಕೆ ಸಾಕಷ್ಟು ಪಾಠವಿದೆ.ಆಧ್ಯಾತ್ಮಿಕ ಸಂಗತಿ ಇಲ್ಲಿ ಬಹುತೇಕ ಜನರಿಗೆ ಅರ್ಥ ಮಾಡಿಕೊಳ್ಳಲು ಒಂದು ಅವಕಾಶ ನೀಡುತ್ತದೆ. ಇನ್ನೊಂದು ಕಡೆ ಭಾರತೀಯ ಜನಕೋಟಿ ಅವರವರ ಅನುಕೂಲಕ್ಕೆ ತಕ್ಕಂತೆ ತಮ್ಮ ಭಾವನಾತ್ಮಕ ವಿಷಯ ಕುರಿತು ಅಲ್ಲದಿದ್ದರೂ ಕಷ್ಟದ ಸಮಯದಲ್ಲಿ ಒಗ್ಗೂಡಿ ಬದುಕುವ ಪಾಠವಾಗಲಿದೆ. ಸಹಜವಾಗಿ ಒಮ್ಮೆ ನಾವೆಲ್ಲರೂ ಜೀವನದ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕೆಯ 9ನೆಯ ಮನೆಯ ಮಗ್ಗಿಯನ್ನು ನೆನಪು ಮಾಡಿಕೊಳ್ಳ ಬೇಕಿದೆ.

ಈ ಮಗ್ಗಿಯಲ್ಲಿ ಒಂಭತ್ತು ಅಥವಾ ಅದರ ನಂಟು ಗಮನಿಸಿ. 9ರಿಂದ ಆರಂಭದ ಮಗ್ಗಿ 9ರಲ್ಲಿಯೇ ಮುಕ್ತಾಯ ಕಾಣಲಿದೆ. ಉದಾಹರಣೆಗೆ 9ಘಿ1=9ಅದರೆ ಇಡೀ ಮಗ್ಗಿಯ ಚರಣಗಳು 18, 27, 36, 45, 54, 63, 72, 81, 90.... ಹೀಗೆ ಮುಕ್ತಾಯಗೊಳ್ಳಲಿವೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಎಲ್ಲಾ ಜೋಡಂಕೆಗಳು ಒಟ್ಟುಗೂಡಿಸಿದಾಗ ಎಲ್ಲಿಯೂ 9 ಗೋಚರಿಸಲಿದೆ. ಅದೇ ಈ 9ರ ಬಾಲವನ್ನು ಅಳಿಸಿಬಿಟ್ಟರೆ ಅಲ್ಲಿ ಸೊನ್ನೆ ಅಥವಾ ಶೂನ್ಯ ಸಂಪಾದನೆ ದೊರಕಲಿದೆ. ಈ ಕಾಲಘಟ್ಟದಲ್ಲಿ ಮನುಷ್ಯ ಮಾತ್ರ ರಾದ ನಾವು ಕನಿಷ್ಟ ಅರ್ಥ ಮಾಡಿಕೊಳ್ಳಲು ಅವಕಾಶ ನೀಡುವದಿಷ್ಟೆ. ಹೇಗೆ ಈ 9ರಿಂದ ಆರಂಭಗೊಳ್ಳುವ ಮಗ್ಗಿ 9ರಲ್ಲಿಯೇ ಮುಕ್ತಾಯ ಕಾಣಲಿದೆಯೊ,ಆ ರೀತಿಯಲ್ಲಿ ಮನುಷ್ಯ ಮಾತ್ರರ ಬದುಕು ಹಿರಿಯ, ಕಿರಿಯ, ಬಡವ ಬಲ್ಲಿದ ಎಂಬ ಅಂತರವಿಲ್ಲದೆ, ಹಿಂದು, ಮುಸ್ಲಿಂ, ಕ್ರೈಸ್ತ, ಪಾರ್ಸಿ ಎಂಬಿತ್ಯಾದಿ ಭೇದ ಎಣಿಸದೆ ಮನುಕುಲದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಬೇಕಿದೆ.

ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ವ್ಯವಸ್ಥೆ ಹೊಂದಿರುವ ದೇಶಗಳ ಪೈಕಿ ಭಾರತದ ಪ್ರಧಾನಮಂತ್ರಿ ಇಡೀ ದೇಶದ ಜನಕೋಟಿಯನ್ನು ಏಕತೆಯ ಕಡೆಗೆ ಕೊಂಡೊಯ್ಯಲು ಸಂಕಲ್ಪ ಬದ್ದರಾಗಿದ್ದಾರೆ ಎಂಬ ಸಾಮಾನ್ಯ ಅರಿವು ನಮಗೆ ಇರಬೇಕಷ್ಟೆ.ಅದು ನಾಳೆಯ ನಮಗಾಗಿ... ನಮ್ಮವರಿಗಾಗಿ, ನಮ್ಮನ್ನು ನಂಬಿರುವವರಿಗಾಗಿ.. ಕಷ್ಟದ ಸಮಯದಲ್ಲಿ ಮನುಕುಲದ ಒಳಿತಿಗಾಗಿ ನೀಡುವ ಕರೆಗೆ ಓಗೊಡಲು ಅನುಮಾನ ಬೇಡ... ಏಳೋಣ... ಎದ್ದೇಳೋಣ... ಜಗತ್ತಿಗೆ ಸಾರಿ ಹೇಳೋಣ... -ಶ್ರೀ ಸುತ