ಸೋಮವಾರಪೇಟೆ, ಏ. 4: ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ಹರಡುವ ಆತಂಕ ನಿವಾರಣೆಯಾಗಿ, ಆದಷ್ಟು ಶೀಘ್ರ ಲಸಿಕೆ ಕಂಡು ಹಿಡಿಯುವಂತಾಗಲಿ ಎಂದು ತಾಲೂಕಿನ ಅರಸಿನಕುಪ್ಪೆ-ಸಿದ್ದಲಿಂಗಪುರದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪಂಚಮಿ ಪೂಜೆಯ ಪ್ರಯುಕ್ತ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ, ವಿಶೇಷ ಪ್ರಾರ್ಥನೆಯನ್ನು ದೇವಾಲಯದ ಪ್ರಧಾನ ಗುರು ರಾಜೇಶ್‍ನಾಥ್ ನೆರವೇರಿಸಿದರು. ಮುಂದಿನ ಪಂಚಮಿಯೊಳಗೆ ಕೊರೊನಾ ವೈರಾಣು ಭೀತಿಯಿಂದ ಜಗತ್ತು ಹೊರಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ರಾಜೇಶ್‍ನಾಥ್, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಗಳು ಕೈಗೊಳ್ಳುತ್ತಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕರೆ ನೀಡಿದರು.

ಕ್ಷೇತ್ರದಲ್ಲಿ ಪ್ರತಿ ಪಂಚಮಿಯಂದು ನೂರಾರು ಭಕ್ತಾದಿಗಳ ಸಮಕ್ಷಮದಲ್ಲಿ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಹೆಚ್ಚು ಜನರು ಒಂದೆಡೆ ಸೇರುವದನ್ನು ಸರ್ಕಾರವೇ ನಿರ್ಬಂಧಿಸಿ, ಸೆಕ್ಷನ್ 144 ವಿಧಿಸಿ ರುವದರಿಂದ, ಕ್ಷೇತ್ರದ ಸಾನ್ನಿಧ್ಯ ದೇವರುಗಳಿಗೆ ಅನೂಚಾನವಾಗಿ ನಡೆದುಕೊಂಡು ಬಂದ ಪೂಜೆಗಳು ಸ್ಥಗಿತಗೊಳ್ಳಬಾರದು ಎಂಬ ಉದ್ದೇಶ ದಿಂದ ಭಕ್ತಾದಿಗಳನ್ನು ಹೊರತು ಪಡಿಸಿ, ಅರ್ಚಕರೊಡಗೂಡಿ ಈ ಬಾರಿಯ ಪಂಚಮಿಯನ್ನು ಸಾಂಕೇತಿಕವಾಗಿ ನಡೆಸಲಾಗಿದ್ದು, ಪ್ರಪಂಚಕ್ಕೆ ಒದಗಿರುವ ಕೊರೊನಾ ಸಂಕಷ್ಟದಿಂದ ಪಾರುಮಾಡುವಂತೆ ಪ್ರಾರ್ಥಿಸಲಾಗಿದೆ ಎಂದು ರಾಜೇಶ್‍ನಾಥ್ ತಿಳಿಸಿದರು.