ಸೋಮವಾರಪೇಟೆ, ಏ. 4: ಸರ್ಕಾರ ವಿಧಿಸಿರುವ ಸಂಪೂರ್ಣ ಲಾಕ್‍ಡೌನ್‍ನಿಂದಾಗಿ ಜನತೆಗೆ ತೀವ್ರ ತೊಂದರೆ ಆಗಿದ್ದು ಮನೆಯಲ್ಲೇ ಇರಲೂ ಕೂಡ ಕೆಲ ಅತ್ಯಾವಶ್ಯಕ ವಸ್ತುಗಳು ಬೇಕೇ ಬೇಕಿದೆ. ಇದಕ್ಕಾಗಿ ಜನರು ತ್ರಾಸ ಪಡುತಿದ್ದಾರೆ. ಹಾಗಾಗಿ ಅವರು ಮನೆಯಲ್ಲಿರಲು ಅನುವು ಮಾಡಿಕೊಡಲು ಕೆಲವು ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ವಾರದಲ್ಲಿ ಮೂರು ದಿನ ಕಾಫಿ ಡಿಪೋಗಳನ್ನು ತೆರೆಯಲು ಸೋಮವಾರದಿಂದ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದರು.ಇಂದು ಬೆಳೆಗಾರರು ಬೆಳೆದ ಕಾಫಿಯನ್ನು ಮಾರಾಟ ಮಾಡಲಾಗದೆ ಅಗತ್ಯ ವಸ್ತುಗಳನ್ನು ಕೊಳ್ಳಲು ಹಣವಿಲ್ಲದೆ ಸಂಕಷ್ಟ ಪಡುತಿದ್ದಾರೆ ಅವರಿಗೆ ಅನುಕೂಲವಾಗಲಿದೆ ಎಂದರು.ಅಲ್ಲದೆ ರೈತರು ಬೆಳೆದ ತರಕಾರಿ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ಪೊಲೀಸರು ಪಾಸ್‍ನೀಡುತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ಜಿಲ್ಲೆಯ ಹೊರಗೆ ಸಾಗಿಸಲೂ ಪೊಲೀಸರಿಂದ ಪಾಸ್‍ಪಡೆಯಬಹುದಾಗಿದೆ. ಅಲ್ಲದೆ ರೈತರು ಸ್ಥಳೀಯ ಮಾರುಕಟ್ಟೆಗಳಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ವಾರದಲ್ಲಿ ಮೂರು ದಿನ 12 ಘಂಟೆಗಳವರೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಇದರಿಂದಾಗಿ ಗ್ರಾಹಕರಿಗೆ ಕಡಿಮೆ ದರಕ್ಕೆ ತರಕಾರಿ ದೊರೆಯಲಿದೆ ಎಂದರು.

ಜಿಲ್ಲಾಡಳಿತದ ಆದೇಶದಂತೆ ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ ಈ ಸಮಯದಲ್ಲಿ ಕಾಫಿ ಡಿಪೋ ತೆರೆಯಬಹುದು. ತರಕಾರಿ ಮಾರಾಟ ಮಾಡಬಹುದು ಈ ಸಂದರ್ಭ ಬೆಳೆಗಾರರು ಕಾಫಿ ಮಾರ ಬಹುದೆಂದರು. ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಜನಜಂಗುಳಿ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.