ನವದೆಹಲಿ, ಏ. 3: ತಾ. 5 ರಂದು ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮನೆಗಳ ಮಹಡಿಗಳಲ್ಲಿ ಅಥವಾ ಮನೆಗಳ ಮುಂಭಾಗ ನಿಂತು ಕ್ಯಾಂಡಲ್, ದೀಪ, ಹಣತೆ, ಮೊಬೈಲ್ ಲೈಟ್ ಅಥವಾ ಟಾರ್ಚ್ ಹಿಡಿದು 9 ನಿಮಿಷಗಳ ಕಾಲ ಬೆಳಕು ಚೆಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಿ ಎಂದು ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶವಾಸಿಗಳೊಂದಿಗೆ ಇಂದು ಬೆಳಿಗ್ಗೆ ಪುಟ್ಟ ವೀಡಿಯೋ ಸಂದೇಶವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿಯವರು ಮನೆಯಲ್ಲಿ ಒಬ್ಬರೇ ಏನು ಮಾಡಬೇಕು. ವೈರಸ್ ವಿರುದ್ಧದ ಯುದ್ಧವನ್ನು ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ. ನಾವು ಮನೆಯೊಳಗೆ ಇದ್ದೇವೆ ಎಂದುಕೊಳ್ಳದಿರಿ. ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲಾ ಜನರೂ ನಿಮ್ಮೊಂದಿಗಿದ್ದಾರೆÉ ಎಂಬ ಭಾವನೆ ತಂದುಕೊಳ್ಳಿ. ನಾವು ಒಬ್ಬಂಟಿ ಅಲ್ಲ. ನಾವೆಲ್ಲ ಒಂದು ಎಂಬ ಸಂದೇಶದ ದೀಪ ಬೆಳಗಿಸೋಣ.ಜನರ ಒಗ್ಗಟ್ಟಿನ ಶಕ್ತಿ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮನೆಯೊಳಗಿದ್ದೇ ಕೊರೊನಾ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದು ಸಾರಿ ಹೇಳಿದ್ದಾರೆ. ದೀಪವನ್ನು ಮನೆಯಲ್ಲಿ ಬೆಳಗಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಎಂದು ಮುನ್ನೆಚ್ಚರಿಕೆಯಿತ್ತಿದ್ದಾರೆ. ದೀಪ ಬೆಳಗುವ ಸಂದರ್ಭ ಎಲ್ಲರಿಗೂ ಒಳಿತನ್ನು ಪ್ರಾರ್ಥಿಸಿ ಎಂದಿದ್ದಾರೆ.ದೇಶದ ಈಗಿನ ಲಾಕ್‍ಡೌನ್ ಪರಿಸ್ಥಿತಿಯನ್ನು ಜನತೆ ಮತ್ತು ಆಡಳಿತ ವ್ಯವಸ್ಥೆ ಉತ್ತಮ ರೀತಿಯಲ್ಲಿ ನಿಭಾಯಿಸಿದ ಬಗ್ಗೆ ಮೋದಿ ಶ್ಲಾಘÀನೆ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಹಲವು ದೇಶಗಳಿಂದ ಭಾರತದ ಲಾಕ್‍ಡೌನ್ ಮುಂಜಾಗ್ರತೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ ಎಂದಿದ್ದಾರೆ. ಇಡೀ ಭಾರತ ಒಂದಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಿದೆ. ಕೊರೊನಾ ವಿರುದ್ಧ ಭಾರತ ಯಶಸ್ವಿ ಹೋರಾಟ ನಡೆಸಬಹುದು ಎಂಬುದು ಸಾಬೀತಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ಶಕ್ತಿಯ ಸಾಮಥ್ರ್ಯ ಏನೆಂದು ಭಾರತ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಇಂದಿನ ಅಂಧಕಾರ ಮತ್ತು ಅನಿಶ್ಚಿತತೆಯ ದಿನಗಳಲ್ಲಿ ಎಲ್ಲಾ ಜನರು ಒಂದಾಗಿರಬೇಕು.
ದೇಶದಲ್ಲಿ ಎಲ್ಲರೂ ಒಂದುಗೂಡಿದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯ, ಜನತಾ ರೂಪದಲ್ಲಿ ಮಹಾ ಶಕ್ತಿಯ ವಿರಾಟ್ ರೂಪದ ಸಾಕ್ಷಾತ್ಕಾರವಾಗಬೇಕಿದೆ, ಕೊರೊನಾ ಎಂಬ ಅಂಧಕಾರದಿಂದ ಪ್ರಕಾಶದೆಡೆಗೆ ಹೋಗಬೇಕು ಎಂದು ನುಡಿದಿದ್ದಾರೆ.