ಕೊಳ್ಳೋರು ಇಲ್ಲದೇ ಲಾಸು.... ಕಣಿವೆ, ಏ. 3: ಇಲ್ಲಿಗೆ ಸಮೀಪದ ಭುವನಗಿರಿ, ಸೀಗೆಹೊಸೂರು, ಮದಲಾಪುರ ಮೊದಲಾದೆಡೆಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕೋಸು

ಬೆಳೆ ಕಟಾವಿಗಿ ಬಂದಿದ್ದು ಕೊಳ್ಳುವವರಿಲ್ಲದೇ ರೈತರು ಅಪಾರ ಹಣವನ್ನು ಕಳೆದುಕೊಂಡಿದ್ದಾರೆ. ಸೀಗೆ ಹೊಸೂರು ರೈತ ಗಿರಿ, ಚಡ್ಡಿಕಾಳಪ್ಪ, ಧರ್ಮ ಮೊದಲಾದವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕೋಸು ಫಸಲು ತೆಗೆಯಲು ಎಕರೆಗೆ 40 ರಿಂದ 45 ಸಾವಿರ ಹಣ ವ್ಯಯಿಸಿದ್ದಾರೆ. ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಎದುರಾದ ಮಾರಕ ಕೊರೊನಾದಿಂದಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ್ದರಿಂದ ರೈತರು ಲಕ್ಷಾಂತರ ರೂಗಳ ನಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಧಾವಿಸಿ ಬಂದು ನಮ್ಮ ಸಂಕಷ್ಟವನ್ನು ನೋಡಿ ಆಗಿರುವ ನಷ್ಟವನ್ನು ಭರಿಸಬೇಕು. ಸರ್ಕಾರದಿಂದ ಬೆಳೆ ಪರಿಹಾರ ಒದಗಿಸಬೇಕು ಎಂದು ಕರವೇ ಕಾರ್ಯಕರ್ತ ಆಟೋ ಜಗದೀಶ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ರೈತರು ತಮಗಾದ ನಷ್ಟದಿಂದ ಬೇಸತ್ತು ಆತ್ಮಹತ್ಯೆ ದಾರಿ ತುಳಿಯದ ಹಾಗೆ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದು ಅವರು ಹೇಳಿದ್ದಾರೆ. - ಮೂರ್ತಿ