ಮಡಿಕೇರಿ, ಏ. 3: ಪ್ರಧಾನಿ ಮೋದಿ ಅವರು ಭಾನುವಾರದಂದು ದೀಪ, ಕ್ಯಾಂಡಲ್, ಟಾರ್ಚ್ ಹಾಗೂ ಮೊಬೈಲ್ ಬೆಳಕನ್ನು ಪಸರಿಸುವ ಮೂಲಕ ಕೊರೊನಾ ವಿರುದ್ಧ ಎಲ್ಲಾ ಭಾರತೀಯರು 9 ನಿಮಿಷಗಳ ಕಾಲ ಏಕಮನಸ್ಕರಾಗಿ ಪ್ರಾರ್ಥಿಸುವಂತೆ ನೀಡಿರುವ ಕರೆಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಹಿಂದೂ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯ ಧಾರ್ಮಿಕ ಪ್ರಮುಖರು ಈ ಬಗ್ಗೆ ಕಾರ್ಯೋನ್ಮುಖರಾಗಿದ್ದು; ಸಮುದಾಯದ ಮಂದಿ ಆ ದಿನ ಸ್ಪಂದಿಸುವಂತೆ ಕರೆಯಿತ್ತಿದ್ದಾರೆ.ಸಮಾಜ ಓಗೊಡಬೇಕುಪ್ರಧಾನಿ ಕರೆಗೆ ಪ್ರತಿಕ್ರಿಯೆ ನೀಡಿರುವ; ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಅವರು; ದೇಶದ ಎಲ್ಲಾ ಜನತೆಗಾಗಿ ಸಮಾಜ ಓಗೊಟ್ಟು; ದೀಪ ಬೆಳಗುವಂತೆ ಕರೆ ನೀಡಿದ್ದಾರೆ. ಅಲ್ಲದೆ ಸಾಮೂಹಿಕ ಸ್ಪಂದನದಿಂದ ಎಲ್ಲರೂ ಒಗ್ಗೂಡಿ ಕೊರೊನಾ ಹರಡುವಿಕೆಗೆ ತಡೆಯೊಡ್ಡುವದು ಅನಿವಾರ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕೂಡ ಪ್ರಧಾನಮಂತ್ರಿಗಳ ಈ ನಿರ್ಧಾರ ಮನುಕುಲದ ಒಳಿತಿಗಾಗಿ ಅತ್ಯಂತ ಮಹತ್ವದ್ದಾಗಿದೆ ಎಂದು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ.

ಕ್ಯಾಂಡಲ್ ಬೆಳಗುವೆವು

ಇಲ್ಲಿನ ಸಂತಮೈಕಲರ ಚರ್ಚ್ ಧರ್ಮಗುರು ರೆ.ಫಾ. ಅಲ್‍ಫ್ರೆಡ್ ಜಾನ್ ಮೆಂಡೋನ್ಸಾ ಅವರು ಮಾತನಾಡುತ್ತಾ; ಪ್ರಧಾನಿ ಮೋದಿ ಅವರ ಕರೆಯಂತೆ; ಎಲ್ಲಾ ಬಂಧುಗಳು ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವಂತೆ ಜನತೆಗೆ ಸಲಹೆ ನೀಡಿದ್ದಾರೆ. ಈ ಸಂಬಂಧ ತಾವೂ ಕೂಡ ಕ್ಯಾಂಡಲ್ ಹಚ್ಚಿ ಪ್ರಾರ್ಥಿಸುವದರೊಂದಿಗೆ ಜನತೆ ಆಚರಿಸುವಂತೆ ‘ವಾಟ್ಸ್‍ಆ್ಯಪ್’ ಸಂದೇಶ ರವಾನಿಸುತ್ತಿರುವದಾಗಿ ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ತಲೆದೋರಿರುವ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಪ್ರಧಾನಿ ಮೋದಿಯವರ ಕರೆಗೆ ಸ್ಪಂದಿಸುವದು ಎಲ್ಲರ ಕರ್ತವ್ಯವಾಗಿದೆ. ಎಲ್ಲ ಬಂಧುಗಳು ಮೇಣದ ಬತ್ತಿ ಹಚ್ಚಿ ಒಗ್ಗಟ್ಟು ಪ್ರದರ್ಶಿಸುವಂತೆ ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಬೇಬಿ ಮ್ಯಾಥ್ಯು ಕರೆಯಿತ್ತಿದ್ದಾರೆ.

ಮುಸ್ಲಿಂ ಧರ್ಮಗುರುಗಳ ಸ್ಪಂದನ

ದೇಶದ ಜನತೆಯನ್ನು ಕಾಡುತ್ತಿರುವ ಕೊರೊನಾ ಎಂಬ ಮಾರಕ ರೋಗದ ವಿರುದ್ಧ ಏಕತೆಯಿಂದ ಹೋರಾಡುವ ಸಲುವಾಗಿ ತಾ. 5 ರಂದು ಭಾನುವಾರ ರಾತ್ರಿ ಜ್ಯೋತಿ ಬೆಳಗುವ ಮೂಲಕ ಐಕ್ಯತೆಯನ್ನು ಪ್ರದರ್ಶಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಗೆ ಕೊಡಗಿನ ಮುಸ್ಲಿಂ ಧರ್ಮಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಪ್ರಧಾನಿ ತಿಳಿಸಿದಂತೆ ಅಂದು ರಾತ್ರಿ 9 ಗಂಟೆಗೆ ಜಿಲ್ಲೆಯ ಎಲ್ಲ ಮುಸ್ಲಿಮರು ತಮ್ಮ ಮನೆ ಮಂದಿಯೊಂದಿಗೆ ಸೇರಿಕೊಂಡು ಕೊರೊನಾ ರೋಗದ ನಿರ್ಮೂಲನೆಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ

(ಮೊದಲ ಪುಟದಿಂದ) ಪ್ರಾರ್ಥಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವಂತೆ ಜಿಲ್ಲೆಯ ಖಾಝಿಗಳಾದ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಹಾಗೂ ಹಾಜಿ ಎಂ.ಎಂ. ಅಬ್ದುಲ್ಲ ಮುಸ್ಲಿಯಾರ್ ಇವರುಗಳು ಎಲ್ಲ ಜಮಾತ್‍ಗಳ ಪ್ರಮುಖರೊಂದಿಗೆ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಸಂಬಂಧಪಟ್ಟವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಉಭಯ ಖಾಝಿಗಳು ಸುತ್ತೋಲೆಯನ್ನು ಕೂಡ ಕಳುಹಿಸಿದ್ದಾರೆಂದು ತಿಳಿದುಬಂದಿದೆ.