ಮಡಿಕೇರಿ, ಏ. 3: ಇದೊಂದು ಮನಕಲುಕುವ ಕಥೆ ಯಾವ ಕುಟುಂಬಕ್ಕೂ ಕೂಡ ಇಂಥ ದುಸ್ಥಿತಿ ಬರಬಾರದು ತಮ್ಮ ಕರುಳ ಕುಡಿಯ ಆಗಮನಕ್ಕಾಗಿ ಕಾದು ಕುಳಿತಿದ್ದ ದಂಪತಿಗಳಿಗೆ ಈ ರೀತಿಯ ಆಘಾತ ಸಿಡಿಲಿನಂತೆ ಬಂದೆರಗಬಾರದಾಗಿತ್ತು. ಹುಟ್ಟುವ ಮೊದಲೇ ಏಳು ತಿಂಗಳ ಕಂದಮ್ಮ ತನ್ನ ತಾಯಿಯ ಗರ್ಭದಲ್ಲಿಯೇ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದು ಆ ಕುಟುಂಬದ ಆಸೆ ಸಂತೋಷವನ್ನು ನುಚ್ಚು ನೂರು ಮಾಡಿತ್ತು. ಇದು ಒಂದು ದುಃಖಕರವಾದ ಸನ್ನಿವೇಶವಾದಾರೆ ಈ ಕುಟುಂಬದ ಇನ್ನೊಂದು ದುರಂತದ ಕಥೆ ಕೇಳಿದರೆ ಎಂಥವರ ಕರುಳು ಚುರ್ ಅನ್ನಿಸದಿರದು...
ದೂರದ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಜಾಕಿನ್ ಗೊಡು ಎಂಬ ಗ್ರಾಮದ ದೇವರಾಜ್ ಹಾಗೂ ಸರೋಜಾ ಎಂಬ ಗಾರೆ ಕೆಲಸ ಮಾಡುವ ಬಡ ದಂಪತಿಗಳು ಒಂದೂವರೆ ತಿಂಗಳ ಹಿಂದೆ ತಮ್ಮ ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಕುಶಾಲನಗರದ ಕೂಡಿಗೆ ಬಳಿ ಖಾಸಗಿ ನಿವೇಶನ ಇರುವ ಬಡಾವಣೆಯಲ್ಲಿ ಕೆಲಸ ನಿರ್ವಹಿಸುತ್ತಾ ಅಲ್ಲಿಯೇ ಒಂದು ಶೆಡ್ ನಿರ್ಮಿಸಿಕೊಂಡು ಆಶ್ರಯ ಪಡೆದಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ತನ್ನ ಮಡದಿಗೆ ಹೊಟ್ಟೆ ನೋವು ಶುರುವಾದಾಗ ಗಾಬರಿಯಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೇಸ್ತ್ರಿ ಯೊಬ್ಬರ ಮುಖಾಂತರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ವಿಪರೀತ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಸರೋಜಾಳನ್ನು ಪರೀಕ್ಷಿಸಿದ ವೈದ್ಯರು ಅವರ ಕುಡಿ ಹೊಟ್ಟೆಯಲ್ಲಿಯೇ ಮರಣ ಹೊಂದಿರುವ ದುಃಖಕರ ವಿಷಯವನ್ನು ತಿಳಿಸುತ್ತಾರೆ. ಹೇಳಿ ಕೇಳಿ ಇಡೀ ದೇಶದಾದ್ಯಂತ ಕೊರೊನಾ ಮಾರಿಯಾ ಆರ್ಭಟಕ್ಕೆ ಸಿಲುಕಿರುವಾಗ ಜಿಲ್ಲಾಡಳಿತ ಕೊಡಗಿನಲ್ಲಿ ಲಾಕ್‍ಡೌನ್ ಮಾಡಿದ್ದರಿಂದ ಅವರಿಗೆ ಆ ಮಗುವಿನ ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗದಂಥ ಸಂದಿಗ್ಧ ಪರಿಸ್ಥಿತಿ ಏರ್ಪಟ್ಟಾಗ ಆಸ್ಪತ್ರೆಯಲ್ಲಿರುವ ಕೆಲವೊಂದು ಸಿಬ್ಬಂದಿಗಳ ಮುಖಾಂತರ ಮಡಿಕೇರಿಯ ಯೂತ್ ಕಮಿಟಿಯ ಗೌರವಾಧ್ಯಕ್ಷ ಖಲೀಲ್ ಬಾಯ್, ಕಮಿಟಿಯ ಅಧ್ಯಕ್ಷ ಜೈನುಲ್ ಅಬಿದ್, ಕೊಡಗು ಬ್ಲಡ್ ಡೋನರ್ಸ್‍ನ ಅಧ್ಯಕ್ಷ ವಿನು ಅಣ್ಣಾ, ಮಡಿಕೇರಿ ರಕ್ಷಣಾ ವೇದಿಕೆಯ ಖಜಾಂಚಿ ಉಮೇಶ್ ಕುಮಾರ್ ಅವರ ಗಮನಕ್ಕೆ ಬಂದಿದೆ.
ಕೂಡಲೇ ಕಾರ್ಯಪ್ರವೃತರಾದ ನಾವುಗಳು ಕರೆ ಬಂದ ಕೂಡಲೇ ನಾವೆಲ್ಲಾ ಆಸ್ಪತ್ರೆಗೆ ದೌಡಾಯಿಸಿ ಆ ಕುಟುಂಬದವರಿಗೆ ಸಾಂತ್ವನ ಹೇಳಿ ಅವರ ಕೋರಿಕೆಯ ಮೇರೆಗೆ ಆ ಮಗುವಿನ ಶವವನ್ನು ಮಡಿಕೇರಿ ನಗರದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ತೀರ್ಮಾನಿಸಿ ಅದರಂತೆ ಕೊಡಗು ಬ್ಲಡ್ ಡೋನರ್ಸ್ ಸಂಘಟನಾ ಕಾರ್ಯದರ್ಶಿ ಸಮೀರ್, ಸಮಾಜ ಸೇವಕರಾದ ಸಂದೀಪ್, ಕೀರ್ತಿ, ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್ ಇವರನ್ನೆಲ್ಲ ಒಳಗೊಂಡ ನಮ್ಮ ತಂಡ ಆ ಕಾರ್ಯಕ್ಕೆ ಬೇಕಾದಂತಹ ಎಲ್ಲ ಸವಲತ್ತುಗಳನ್ನು ಹೊಂದಿಸಿಕೊಂಡು ಸ್ವಂತ ನಾವುಗಳೇ ಮುಂದೆ ನಿಂತು ಗುಂಡಿ ತೆಗೆಯುವುದರಿಂದ ಹಿಡಿದು ಎಲ್ಲಾ ಕಾರ್ಯವನ್ನು ಮಾಡಿ ಮುಗಿಸಿ ಕೊಟ್ಟಿರುತ್ತೇವೆ.
ಇಂತಹÀ ಸಮಯದಲ್ಲಿ ನಮ್ಮ ಗಮನಕ್ಕೆ ಬಂದಂತ ಮತ್ತೊಂದು ದುಃಖಕರ ವಿಷಯವೆಂದರೆ ಈಗ ತೀರಿಕೊಂಡ ಮಗು ಇವರ ಎರಡನೇ ಮಗು ಎಂದು ಈ ದಂಪತಿಗಳ ಮೊದಲ ಮಗು ಹೆಣು.್ಣ ಈ ಹೆಣ್ಣು ಮಗು ಕೂಡ ಏಳನೇ ತಿಂಗಳಿನಲ್ಲಿ ಗರ್ಭದಲ್ಲಿಯೆ ತೀರಿಕೊಂಡ ವಿಷಯ ಕೇಳಿ ನಮಗೆ ದಿಗ್ಭ್ರಮೆಯಾಯಿತು. ಹೀಗಿರುವಾಗ ಇವರ ಪರಿಸ್ಥಿತಿ ಹೇಗಿರಬೇಡ. ಇದಕ್ಕೆ ಕಾರಣ ಏನು ಅನ್ನುವುದು ನಮಗೆ ತಿಳಿಯದ ವಿಷಯವಾಗಿತ್ತು. ಸಣ್ಣ ವಯಸ್ಸಿನಲ್ಲಿ ಮದುವೆಯಾದ ಕಾರಣಕ್ಕೋ, ವಿಪರೀತ ಕೆಲಸದ ಒತ್ತಡದ ಪ್ರಭಾವ ಗರ್ಭಿಣಿ ಮಹಿಳೆಯ ಮೇಲೆ ಬಿದ್ದಿದ್ದಕ್ಕೋ ಸರಿಯಾದ ಆರೈಕೆಯ ಕೊರತೆಯೋ ಅಥವಾ ಇನ್ನಿತರ ಬೇರೆ ಯಾವುದೋ ಕಾರಣಕ್ಕೊ ಈ ರೀತಿ ಆಗಿರಬಹುದೇನೋ ಇದು ನಮಗೆ ತಿಳಿಯದಾಯಿತು.
ಒಟ್ಟಿನಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ನಮ್ಮ ಗಮನಕ್ಕೆ ಬಂದ ಕೂಡಲೇ ಎಲ್ಲಾ ಕೆಲಸವನ್ನು ಮಾಡಿ ಇವರನ್ನು ಮಡದಿಯ ಊರಾದ ಬೆಂಗಳೂರಿಗೆ ವಾಹನದ ಸೌಕರ್ಯದೊಂದಿಗೆ ಕಳುಹಿಸಿ ಕೊಡಲಾಯಿತು. ಕೊನೆಗೂ ಕಣ್ಣು ತೆರೆಯುವ ಮೊದಲೇ ಅವರ ಎರಡು ಮಕ್ಕಳು ಕೂಡ ಈ ಜಗತ್ತಿನಿಂದ ಮರೆಯಾಗಿದ್ದು ಕರುಳು ಹಿಂಡುವಂತದ್ದು. ಇಂತಹ ಪರಿಸ್ಥಿತಿ ಯಾವ ದಂಪತಿಗೂ ಬರಬಾರದು ಎಂಬುದೇ ನಮ್ಮೆಲ್ಲರ ಆಶಯ. ಇದರ ಜೊತೆಗೆ ಪ್ರತಿಯೊಂದು ದಂಪತಿಗಳು ಕೂಡ ಇಂಥ ಸಮಯದಲ್ಲಿ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ.
ಇತ್ತ ದೇವರಾಜ್ ದೂರದ ಬೆಂಗಳೂರಿನ ಮಡದಿಯ ತಾಯಿ ಮನೆಗೆ ತನ್ನ ಮಡದಿಯನ್ನು ಬಿಟ್ಟು ಅಲ್ಲಿಂದ ಇಲ್ಲಿಗೆ ಬರಲು ಯಾವುದೇ ವಾಹನದ ಸೌಕರ್ಯ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ತನ್ನ ಸಹೋದರನೊಂದಿಗೆ ಬಂದು ಇದೀಗ ತನ್ನ ತಂದೆ ತಾಯಿ ಇರುವ ಉಡುಪಿಯ ಕಾಪುವಿನ ಕಡೆಗೆ ಪ್ರಯಾಣಿಸಿದ್ದಾನೆ. ಯಾವುದೇ ಕೆಲಸ ಇಲ್ಲದ ಕಾರಣ ನಿರಾಶೆಯ ಮೊಗದೊಂದಿಗೆ ತನ್ನ ಕುಡಿಗಳೆರಡನ್ನೂ ಕಳೆದುಕೊಂಡ ದುಃಖದೊಂದಿಗೆ ತನ್ನ ತಂದೆ - ತಾಯಿಯರನ್ನು ಕರೆದುಕೊಂಡು ಮರಳಿ ತನ್ನ ಊರಿಗೆ ಹೊರಟಿದ್ದಾನೆ.
-ಉಮೇಶ್ ಕುಮಾರ್