ಮಡಿಕೇರಿ, ಏ. 3: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಕ್ರಮಕೈಗೊಂಡಿರುವ ಬೆನ್ನಲ್ಲೇ; ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ; ಗಿರಿಜನ ಹಾಡಿಗಳಿಗೆ ಆಹಾರದ ಕಿಟ್ ಪೂರೈಕೆ ನಡೆದಿದೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಮೊಬೈಲ್ ವಾಹನಗಳಲ್ಲಿ ಪಡಿತರ ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಬಂಧಿಸಿದ ಇಲಾಖೆಯ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು; ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಿಂದ; ಹಾಡಿಗಳ ಪ್ರತಿ ಕುಟುಂಬಕ್ಕೆ ಅಕ್ಕಿ, ಬೇಳೆ, ಗೋಧಿ, ಸಕ್ಕರೆ, ಉಪ್ಪು, ಎಣ್ಣೆ ಇತ್ಯಾದಿಯನ್ನು ಸರಕಾರ ನಿಗದಿ ಗೊಳಿಸಿರುವ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದರು.

ಅಂತೆಯೇ ಜಿಲ್ಲೆಯಲ್ಲಿ ಅಂತ್ಯೋದಯ, ಬಡತನ ರೇಖೆಯ ಕಾರ್ಡುದಾರರು, ಬಡತನ ರೇಖೆಯಿಂದ ಮೇಲ್ಪಟ್ಟವರಿಗೂ ಪಡಿತರ ಪೂರೈಕೆ ಮಾಡಲಾಗುತ್ತಿದ್ದು; ಬಡತನ ರೇಖೆ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ಮತ್ತು ಎಪಿಲ್ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರ ನಿಗದಿಗೊಳಿಸಿರುವ ದರಕ್ಕೆ ಆಹಾರ ಧಾನ್ಯ ಪೂರೈಸುತ್ತಿರುವದಾಗಿ ವಿವರಿಸಿದರು.

ಮೂರು ತಾಲೂಕುಗಳಿಗೆ ಜಿಲ್ಲಾಮಟ್ಟದ ಮೂವರು ಅಧಿಕಾರಿ ಗಳನ್ನು ಉಸ್ತುವಾರಿಗೆ ನಿಯೋಜಿಸ ಲಾಗಿದೆ. ಆಯಾ ತಾಲೂಕು ಹಂತದ ಅಧಿಕಾರಿಗಳು ಹೋಬಳಿ ಮತ್ತು ಎಲ್ಲಾ ಗ್ರಾ.ಪಂ. ಹಂತದಲ್ಲಿ ಪಡಿತರ ಸಮರ್ಪಕ ಪೂರೈಕೆಗೆ ನಿಗಾವಹಿಸುತ್ತಿ ದ್ದಾರೆ ಎಂದರು. ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳು ಅಕ್ಕಿ ಇತ್ಯಾದಿ ದಾಸ್ತಾನಿಗೆ ಯಾವದೇ ಕೊರತೆ ಉಂಟಾಗದಂತೆ; ಜನರು ಹಸಿವಿನಿಂದ ತೊಂದರೆಗೆ ಒಳಗಾಗ ದಂತೆ ಮುನ್ನೆಚ್ಚರಿಕೆ ಯೊಂದಿಗೆ ಆಹಾರ ಸಂಗ್ರಹ ಮಾಡಲಾಗಿದೆ ಎಂದು ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದರು.

ನ್ಯಾಯಬೆಲೆಗೆ ತರಕಾರಿ : ಗ್ರಾಮೀಣ ಜನತೆಗೆ ತರಕಾರಿ ಇತ್ಯಾದಿಯನ್ನು ನ್ಯಾಯಬೆಲೆಗೆ ಪೂರೈಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿ.ಪಂ. ಉಪಕಾರ್ಯದರ್ಶಿ ಗುಡೂರು ಬೀಮಸೇನ ಮಾಹಿತಿ ನೀಡಿದರು. ಈ ಸಂಬಂಧ ವಿವಿಧ ಗ್ರಾಮ ಪಂಚಾಯಿತಿಗಳಿಗೆ ತಾವು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವದಾಗಿ ಅವರು ಮಾರ್ನುಡಿದರು. ಈಗಿನ ಸಂಕಟ ಮಯ ಪರಿಸ್ಥಿತಿಯನ್ನು ಜಿಲ್ಲೆಯ ಜನತೆ ಅರ್ಥೈಸಿಕೊಳ್ಳಬೇಕಿದೆ ಎಂದ ಅವರು; ಜನತೆಯ ಬೇಡಿಕೆಗೆ ಪೂರಕ ನೆರವಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸುತ್ತಿರುವದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.