ನವದೆಹಲಿ, ಏ. 3: ಕೇರಳದಲ್ಲಿ ಹಾಗೂ ಗಡಿಪ್ರದೇಶವಾದ ಕಾಸರಗೋಡುವಿನಲ್ಲಿ ಕೊರೊನಾ ಸೋಂಕು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೊಡಗು - ಕೇರಳ ಗಡಿಯೂ ಸೇರಿದಂತೆ ಕರ್ನಾಟಕ ಕೇರಳದ ಎಲ್ಲಾ ಗಡಿಪ್ರದೇಶಗಳನ್ನು ಇತ್ತೀಚೆಗೆ ಬಂದ್ ಮಾಡಲಾಗಿತ್ತು. ಈ ಕ್ರಮ ಅಸಿಂಧು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿ ಗಡಿಪ್ರದೇಶಗಳನ್ನು ಮತ್ತೆ ಮುಕ್ತಗೊಳಿಸುವಂತೆ ಆದೇಶಿಸಿತ್ತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರವು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಕರ್ನಾಟಕದ ಪರವಾಗಿ ವಕೀಲರಾದ ಶುಬ್ರಾಂಶು ಪದಿ ಅವರು ಮೇಲ್ಮನವಿ ಸಲ್ಲಿಸಿ ವಾದಿಸಿದರು. ಕೇರಳದಲ್ಲಿ ಹಬ್ಬುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗವು ಕರ್ನಾಟಕಕ್ಕೆ ತ್ವರಿತವಾಗಿ ಪಸರಿಸಬಹುದು ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ - ಕೇರಳ ಗಡಿಪ್ರದೇಶಗಳನ್ನು ಬಂದ್ ಮಾಡಲಾಗಿದೆ ಎಂದರು. ಅಲ್ಲದೇ ಕಾಸರಗೋಡುವಿನಲ್ಲಿ ಈ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪ ಪಡೆದಿದ್ದು; 100 ಕ್ಕಿಂತಲೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೇರಳ ರಾಜ್ಯವು ಕೂಡ ದೇಶದಲ್ಲಿಯೇ ಅಧಿಕ ಸೋಂಕು ಹರಡಿದ ರಾಜ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಗಡಿಪ್ರದೇಶವನ್ನು ಬಂದ್ ಮಾಡಲು ಬಯಸಿದ್ದು; ಸರಕಾರ ಈ ಕೆಲಸ ಮಾಡಿದೆ ಎಂದರು. ಅದೇ ರೀತಿ ಈಗಾಗಲೇ ಕರ್ನಾಟಕದಲ್ಲಿ ಕೊರೊನಾ ಬಾಧಿತ ಜಿಲ್ಲೆಗಳ ಹಿತದೃಷ್ಟಿಯಿಂದಲೂ ಜಿಲ್ಲೆಯ ಗಡಿಗಳನ್ನು ಕೂಡ ಬಂದ್ ಮಾಡಲಾಗಿದೆ ಎಂದು ವಾದಿಸಿದರು.
ಕೇರಳ ಸರ್ಕಾರದ ಪರ ವಾದಿಸಿದ ಎನ್.ಪಿ. ರಾಜ್‍ಮೋಹನ್ ಉನ್ನಿತ್ತಾನ್ ಅವರು ಗಡಿ ಬಂದ್ ಮಾಡಿರುವ ಕ್ರಮ ಸಮರ್ಪಕವಾಗಿರದೆ; ಅವ್ಯವಸ್ಥಿತವಾಗಿದೆ ಹಾಗೂ ಇದರಿಂದಾಗಿ ಕೇರಳಕ್ಕೆ ಅಪಾಯ ಉಂಟಾಗಿದೆ. ಈಗಾಗಲೇ ಕೇರಳದಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಗಡಿ ದಾಟಿ ತೆರಳಬೇಕಿದ್ದ ಇಬ್ಬರು ರೋಗಿಗಳನ್ನು ಒಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆಯಲಾಗಿದೆ. ಇದರಿಂದಾಗಿ ಕೇರಳ ಜನತೆಗೆ ಅಪಾಯ ಉಂಟಾಗಿದೆ ಎಂದರು.