ಮಡಿಕೇರಿ ಏ. 3: ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮನೆ ಮನೆಗೆ ಅಡುಗೆ ಅನಿಲ ತಲುಪಿಸಲಾಗುತ್ತಿದೆ ಎಂದು ಎಲ್‍ಪಿಜಿ ಮಂಗಳೂರು ವಿಭಾಗದ ಸಹಾಯಕ ವ್ಯವಸ್ಥಾಪಕರು ಹಾಗೂ ಜಿಲ್ಲಾ ಎಲ್‍ಪಿಜಿ ನೋಡಲ್ ಅಧಿಕಾರಿ ಅಭಿಜಿತ್ ಪಿ. ವಿಜಯ್ ತಿಳಿಸಿದ್ದಾರೆ.

ನಗದು ನಿರ್ವಹಣೆಯನ್ನು ತಪ್ಪಿಸಲು ಗ್ರಾಹಕರು ಆನ್‍ಲೈನ್‍ನಲ್ಲಿ ಬುಕ್ ಮಾಡಿ ಪಾವತಿಸುವಂತಾಗ ಬೇಕು ಎಂದು ಅವರು ಮನವಿ ಮಾಡಿದ್ದಾರೆ. ಲಾಕ್‍ಡೌನ್ ಅವಧಿ ಯಲ್ಲಿ ಎಲ್ಲಾ ಗ್ರಾಹಕರಿಗೆ ನಿರಂತರ ಅಡುಗೆ ಅನಿಲ ಪೂರೈಸಲಾಗುವುದು. ಎಲ್‍ಪಿಜಿ ಸಿಲಿಂಡರ್ ಸರಬರಾಜು ನಿರ್ವಹಿಸಲು ವಿತರಕ ಸಿಬ್ಬಂದಿ, ಗೊಡೌನ್ ಕೀಪರ್, ಮೆಕ್ಯಾನಿಕ್ಸ್ ಮತ್ತು ಡೆಲಿವರಿ ಹುಡುಗರು ಸಂಪೂರ್ಣ ಸಿದ್ಧತೆಯಲ್ಲಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ಸರ್ಕಾರವು ಎಲ್ಲಾ ಉಜ್ವಲ ಗ್ರಾಹಕರಿಗೆ 2020 ರ ಏಪ್ರಿಲ್‍ನಿಂದ ಜೂನ್‍ವರೆಗೆ ಪ್ರತಿ ತಿಂಗಳಿಗೆ 1 ರಂತೆ 3 ಉಚಿತ ಎಲ್‍ಪಿಜಿ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ಉಜ್ವಲ ಯೋಜನೆ ಯಡಿ ಎಲ್‍ಪಿಜಿ ಖರೀದಿಸಲು ಮೂರು ತಿಂಗಳ ಹಣವನ್ನು ಆಯಾ ತಿಂಗಳಿನಲ್ಲಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಹೊಂದಿರುವವರ ಖಾತೆಗೆ ನೀಡಲಾಗುವುದು. ಒಟ್ಟಾರೆಯಾಗಿ ಈ ಯೋಜನೆಯಡಿ ಕೊಡಗು ಜಿಲ್ಲೆಯ 14,892 ಉಜ್ವಲ ಫಲಾನುಭವಿಗಳಿಗೆ ಉಚಿತ ಎಲ್‍ಪಿಜಿ ದೊರೆಯಲಿದೆ ಎಂದು ಮಂಗಳೂರು ಎಲ್‍ಪಿಜಿ ಪ್ರಾಂತ್ಯದ ಎಲ್‍ಪಿಜಿ ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕರು ಮತ್ತು ಎಲ್‍ಪಿಜಿ ಜಿಲ್ಲಾ ನೋಡಲ್ ಅಧಿಕಾರಿ ತಿಳಿಸಿದ್ದಾರೆ.

ಕೋವಿಡ್-19 ಸಂಬಂಧ ಎಲ್‍ಪಿಜಿ ವಿತರಕರು, ಸಾಗಣೆದಾರರು ಮತ್ತು ಎಲ್‍ಪಿಜಿ ಸ್ಥಾವರಗಳಲ್ಲಿನ ಗುತ್ತಿಗೆದಾರರಿಗೆ ಯಾವುದೇ ರೀತಿಯ ಜೀವಹಾನಿ ಸಂಭವಿಸಿದಲ್ಲಿ ಅಂತಹ ಸಿಬ್ಬಂದಿಯ ಕುಟುಂಬಕ್ಕೆ ರೂ. 5 ಲಕ್ಷಗಳ ವಿಮೆಯನ್ನು ಸರ್ಕಾರದ ನಿರ್ದೇಶನದಂತೆ ಕ್ರಮವಹಿಸಲಾಗು ವುದು ಎಂದು ಹೇಳಿದ್ದಾರೆ.