ಮಡಿಕೇರಿ, ಏ. 2: ಲಾಕ್ಡೌನ್ ಇದ್ದರೂ ಬ್ಯಾಂಕ್ಗಳು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಎಲ್ಲ ಬ್ಯಾಂಕ್ಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಮಯಾವಕಾಶ ನೀಡಲಾಗಿದೆ.
ಸಹಕಾರ ಇಲಾಖೆಯಡಿ ಬರುವ ಸಹಕಾರಿ ಬ್ಯಾಂಕ್ಗಳು ಹಾಗೂ ಪತ್ತಿನ ಸಹಕಾರಿ ಸಂಘಗಳಿಗೆ ಆರ್.ಬಿ.ಐ. ನಿಯಮಗಳು ಅನ್ವಯವಾಗುವುದಿಲ್ಲ. ಸಹಕಾರಿ ನಿಯಮಗಳ ಪ್ರಕಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕಾಗಿದೆ. ಆದರೆ, ಪರಿಸ್ಥಿತಿಗನುಗುಣವಾಗಿ ಜಿಲ್ಲೆಯ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಗೂ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ ತಿಳಿಸಿದ್ದಾರೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಬೆಳಿಗ್ಗೆ 10 ರಿಂದ 2 ರವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ನೌಕರರು ದಿನಬಿಟ್ಟು ದಿನ ಪಾಳಿಯನ್ವಯ ಕೆಲಸ ಮಾಡುತ್ತಿದ್ದಾರೆ. ವಿ.ಎಸ್.ಎಸ್.ಎನ್. ಗಳು ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಹಕರಿಗಾಗಿ ತೆರೆದಿರುತ್ತವೆ. ನಂತರದಲ್ಲಿ ಸಿಬ್ಬಂದಿಗಳು ಬ್ಯಾಂಕ್ನ ಆಂತರಿಕ ಕೆಲಸಗಳನ್ನು ಪೂರೈಸಲಿ ದ್ದಾರೆ. ಇದೀಗ ಆರ್ಥಿಕ ವರ್ಷಾಂತ್ಯದ ಸಮಯವಾಗಿದ್ದು, ಸಾಲ ಮರುಪಾವತಿ, ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯವಾದ್ದ ರಿಂದ ಸಾಕಷ್ಟು ಕೆಲಸಗಳಿರುತ್ತವೆ. ಅಲ್ಲದೆ, ವಿ.ಎಸ್.ಎಸ್.ಎನ್.ಗಳಿಗೆ ಆಯಾ ಗ್ರಾಮಗಳ, ಸಂಘದ ಸದಸ್ಯರುಗಳು ಮಾತ್ರ ಬರುವುದರಿಂದ ಸಿಬ್ಬಂದಿಗಳು ಕೂಡ ಸ್ಥಳೀಯರೇ ಇರುವುದರಿಂದ ಸಮಸ್ಯೆಗಳೇನು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಲು ಹೇರಿಕೆ ಇಲ್ಲ. ಮಧ್ಯಾಹ್ನದ ಬಳಿಕ ಸಿಬ್ಬಂದಿಗಳೇ ಆಂತರಿಕ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಇಲ್ಲವಾದಲ್ಲಿ ನಂತರದಲ್ಲಿ ಕೆಲಸ ವಿಳಂಬವಾಗಿ ನಿಭಾಯಿಸುವದು ಕಷ್ಟಕರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.