ಶನಿವಾರಸಂತೆ, ಏ. 2: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಏ. 14ರ ವರೆಗೆ ಸಂತೆ ಮಾರುಕಟ್ಟೆ ಮತ್ತು ಗಡಿ ಭಾಗದ ರಸ್ತೆಗಳು ಬಂದ್ ಆಗಿರುವುದರಿಂದ ರೈತರು ಬೆಳೆದ ಶುಂಠಿ, ಹಸಿಮೆಣಸಿನಕಾಯಿ, ತರಕಾರಿ ಮಾರಾಟ ಮಾಡಲು ಸಾಧ್ಯ ವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕೊಡ್ಲಿಪೇಟೆ ಹೊಸ ಮುನ್ಸಿಪಾಲಿಟಿ ನಿವಾಸಿ ನಿವೃತ್ತ ಯೋಧ ದೇವರಾಜ್ ಎಂಬವರು ತನ್ನ ಒಂದು ಎಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ ಬೆಳೆದಿದ್ದರು. ಇದೀಗ ಹಸಿಮೆಣಸಿನ ಕಾಯಿ ಕಟಾವಿಗೆ ಬಂದಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಏ. 14ರ ವರೆಗೆ ‘ಲಾಕ್‍ಡೌನ್’ ಕಾರಣದಿಂದಾಗಿ ರೈತರಿಂದ ನೇರವಾಗಿ ಖರೀದಿಸುವ ಮೆಣಸಿನಕಾಯಿ ಬೆಳೆಗೆ ಸಂತೆ ಮಾರುಕಟ್ಟೆ ಇಲ್ಲದೆ ಹಾಗೂ ಉತ್ತಮ ಬೆಲೆಗೆ ಖರೀದಿ ಮಾಡುವ ವರ್ತಕರು ಇಲ್ಲದ ಕಾರಣದಿಂದ ದೇವರಾಜ್ ಅವರು ಕಟಾವಿಗೆ ಬಂದಿದ್ದ ಮೆಣಸಿನಕಾಯಿ ಹಣ್ಣಾಗಿ ಕೊಳೆತು ಹೋಗುವ ಪರಿಸ್ಥಿತಿ ಕಂಡು ಮೆಣಸಿನಕಾಯಿ ಕಟಾವು ಮಾಡಿಸಿ ಮೂಟೆಯಲ್ಲಿ ತುಂಬಿಸಿ ಬುಧವಾರ ಕೊಡ್ಲಿಪೇಟೆ ಅಗತ್ಯವಸ್ತುಗಳನ್ನು ಖರೀದಿಸಲು ಸರಕಾರ ಅವಕಾಶ ಮಾಡಿಕೊಟ್ಟ ಅವಧಿಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ತರಕಾರಿ ಇನ್ನಿತರ ವಸ್ತುಗಳನ್ನು ಕೊಳ್ಳಲು ಬಂದವರಿಗೆ ಉಚಿತವಾಗಿ ವಿತರಿಸಿದರು. ಅವರು ಖರೀದಿಸಲು ಬಂದವರಿಗೆ ಹಸಿಮೆಣಸಿನಕಾಯಿಯನ್ನು ಉಚಿತ ವಾಗಿ ಕೊಡುತ್ತೇನೆ ತೆಗೆದುಕೊಂಡು ಹೋಗುವಂತೆ ಕೂಗಿ-ಕೂಗಿ ಕರೆದು ವಿತರಿಸುತ್ತಿದ್ದರು.

ಈ ಸಂದರ್ಭ ಅಗತ್ಯ ವಸ್ತುಗಳನ್ನು ಖರೀದಿಗೆ ಬಂದವರು ಕೋವಿಡ್ 19 ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ತಮಗೆ ಬೇಕಾದಷ್ಟು ಬಾಚಿಕೊಂಡು ಹೋಗುತ್ತಿದ್ದರು. ರೈತ ದೇವರಾಜ್ ತಂದಿದ್ದ 10 ಮೂಟೆ ಹಸಿಮೆಣಸಿನ ಕಾಯಿಯನ್ನು ಜನರು ಒಂದು ಬಿಡದಂತೆ ತೆಗೆದುಕೊಂಡು ಹೋದರು.