ಶನಿವಾರಸಂತೆ, ಏ. 2: ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ಗುಂಡೂರಾವ್ ಬಡಾವಣೆಗೆ ತಾ. 1 ರಂದು ಬೆಂಗಳೂರಿನಿಂದ ಮಹಿಳೆಯೋರ್ವರು ಬಂದಿರುವುದನ್ನು ಗಮನಿಸಿದ ಸಾರ್ವಜನಿಕರು ಗಾಬರಿಯಾಗಿದ್ದಾರೆ. ವಿಚಾರ ತಿಳಿದ ಗ್ರಾ.ಪಂ. ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಗುರುವಾರ ಬೆಳಿಗ್ಗೆ ಮಹಿಳೆಯ ಮನೆಗೆ ಭೇಟಿ ನೀಡಿ ಪೂರ್ವಪರ ವಿಚಾರಿಸಿದರು. ಅವರ ಹಾಗೂ ಕುಟುಂಬದ ರಕ್ಷಣೆಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸೂಚಿಸಿ, ಮಹಿಳೆಯ ಕೈಗೆ ಸೀಲ್ ಹಾಕಿ ಕ್ರಮವಾಗಿ ಗೃಹಬಂಧನ ಪಾಲಿಸುವಂತೆ ಸೂಚಿಸಿದರು. ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷ ಮಹಮ್ಮದ್ ಗೌಸ್, ಪಿಡಿಒ ಮೇದಪ್ಪ, ಬಿಲ್ಕಲೆಕ್ಟರ್ ವಸಂತ, ಆರೋಗ್ಯ ಕಾರ್ಯಕರ್ತೆ ಸರಸ್ವತಿ, ಆಶಾ ಕಾರ್ಯಕರ್ತೆಯರಾದ ಉಷಾ ಜಯಸ್, ಆಶಾ, ಕಂದಾಯ ಇಲಾಖೆಯ ಮಂಜುನಾಥ್, ಹೂವಯ್ಯ, ಗ್ರಾ.ಪಂ.ನ ಧರ್ಮರಾಜ್ ಹಾಜರಿದ್ದರು.