ಮಡಿಕೇರಿ, ಏ. 2: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವವರನ್ನು ಪತ್ತೆ ಹಚ್ಚಿ ಅವರುಗಳನ್ನು ಮನೆಯಲ್ಲಿಯೇ ಇರುವಂತೆ ನಿಗಾ ವಹಿಸಲಾಗಿದೆ.

ಮಕ್ಕಂದೂರು ಗ್ರಾ.ಪಂ. ವತಿಯಿಂದ ಮಕ್ಕಂದೂರು, ಮುಕ್ಕೋಡ್ಲು, ಹೆಮ್ಮೆತ್ತಾಳು, ಮೇಘತ್ತಾಳು ಮುಂತಾದೆಡೆ ಮನೆ ಮನೆಗೆ ಭೇಟಿ ನೀಡಿ ಹೊರ ಜಿಲ್ಲೆ, ರಾಜ್ಯದಲ್ಲಿ ಕೆಲಸ, ಕಾರ್ಯನಿಮಿತ್ತ ತೆರಳಿ ವಾಪಸ್ ಬಂದಿರುವವರನ್ನು ಗುರುತಿಸಿ, ಅವರುಗಳಿಗೆ ಸೀಲ್ ಹಾಕಿ ಮನೆಯಲ್ಲಿಯೇ ನಿಗಾದಲ್ಲಿರುವಂತೆ ಸೂಚನೆ ನೀಡಲಾಗಿದೆ.

ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್, ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಆರೋಗ್ಯ ಇಲಾಖೆ ದಾದಿ ಉಷಾ, ಆಶಾ ಕಾರ್ಯಕರ್ತೆ ನಾಗರತ್ನ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ತಪಾಸಣೆ ಮಾಡಿದರು.

ಗ್ರಾಮ ಪಂಚಾಯಿಯಲ್ಲಿ ವೈರಸ್ ಲಕ್ಷಣಗಳು ಕಂಡುಬಂದಲ್ಲಿ ತುರ್ತು ಸೇವೆಗಾಗಿ ರಮೇಶ್ ಬಿ.ಎಸ್. (9448133651), ನೀಲ್ ಆರ್. ಸುವರ್ಣ (8277727837), ಜತ್ತಪ್ಪ ಬಿ.ಕೆ. (9480290703) ಇವರುಗಳನ್ನು ಸಂಪರ್ಕಿಸಹುದಾಗಿದೆ.