ವೀಡಿಯೋ ಸಂದೇಶ ಹಂಚಿಕೊಳ್ಳಲಿರುವ ಪ್ರಧಾನಿ
ನವದೆಹಲಿ, ಏ. 2: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಸಂದೇಶವನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ದೇಶದ ಜನತೆಯೊಂದಿಗೆ ಸಣ್ಣ ವೀಡಿಯೋ ಸಂದೇಶವನ್ನು ಹಂಚಿಕೊಳ್ಳುತ್ತೇನೆ ಎಂದು ಪ್ರಧಾನಿ ಇಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ಮೂರನೇ ಬಾರಿಗೆ ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮಧ್ಯೆ, ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 2000 ದಾಟಿದ್ದು, ಮಾರಕ ಸೋಂಕಿನಿಂದ ಸುಮಾರು 50 ಹೆಚ್ಚು ಸಾವುಗಳು ಸಂಭವಿಸಿವೆ.
ಲಾಕ್‍ಡೌನ್ ಅಂತ್ಯದ ಬಗ್ಗೆ ಸುಳಿವು
ನವದೆಹಲಿ, ಏ. 2 : ವೈರಸ್ ಹಾಟ್‍ಸ್ಪಾಟ್‍ಗಳನ್ನು ಗುರುತಿಸಿ, ಅಲ್ಲಿಂದ ಬೇರೆಡೆಗೆ ಹರಡದಂತೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಸಿಎಂಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಸಮುದಾಯಗಳ ನಾಯಕರು, ಸಮಾಜ ಕಲ್ಯಾಣ ಸಂಘಟನೆಗಳೊಂದಿಗೆ ಮಾತನಾಡಲು ಸ್ಥಳಿಯ ನಾಯಕರಿಗೆ ಸೂಚನೆ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಗುಂಪುಗಳು ರಚನೆ, ಜಿಲ್ಲಾ ಕಣ್ಗಾವಲು ಅಧಿಕಾರಿಗಳ ನೇಮಕ ಮಾಡಬೇಕು. ಪರೀಕ್ಷೆಗಾಗಿ ಮಾನ್ಯತೆ ಪಡೆದ ಲ್ಯಾಬ್‍ಗಳಿಂದ ಡಾಟಾ ಪಡೆಯಲು ಸೂಚನೆ, ಇದರಿಂದಾಗಿ ಜಿಲ್ಲೆ, ರಾಜ್ಯ ಕೇಂದ್ರಗಳಲ್ಲಿ ಡಾಟಾ ಸಮನ್ವಯತೆ ಸಾಧ್ಯವಾಗಲಿದೆ. ಬ್ಯಾಂಕ್‍ಗಳಲ್ಲಿ ಜನಸಂದಣಿ ತಪ್ಪಿಸಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಬೇಕು. ಕೋವಿಡ್-19 ಹರಡುವಿಕೆ ತಡೆಗಟ್ಟಲು ವಿಧಿಸಲಾಗಿದ್ದ ಲಾಕ್‍ಡೌನ್‍ನಿಂದ ಒಂದಷ್ಟು ಯಶಸ್ಸು ಸಾಧಿಸಲಾಗಿದ್ದು, ಇದಕ್ಕೆ ಸಹಕರಿಸಿದ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಹೇಳಿದರು. ಲಾಕ್‍ಡೌನ್ ಮುಗಿಯುತ್ತಿದ್ದಂತೆಯೇ ಸಾಮಾನ್ಯವಾದ ಎಕ್ಸಿಟ್ ಸ್ಟ್ರಾಟಜಿಗಾಗಿ ಸಲಹೆ ನೀಡಬೇಕೆಂದು ಮೋದಿ ಲಾಕ್‍ಡೌನ್‍ನಿಂದ ಹೊರಗೆ ಬರುವುದಕ್ಕೆ ರೂಪಿಸಬೇಕಾದ ಕಾರ್ಯತಂತ್ರಕ್ಕೆ ಸಲಹೆ ಕೇಳುವ ಮೂಲಕ ತಾ. 14 ಕ್ಕೆ ಲಾಕ್‍ಡೌನ್ ಅಂತ್ಯದ ಬಗ್ಗೆ ಸುಳಿವು ನೀಡಿದರು.
ಧಾರ್ಮಿಕ ಸಭೆಯ 400 ಮಂದಿಗೆ ಸೋಂಕು
ನವದೆಹಲಿ, ಏ. 2: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಟ 400 ಮಂದಿಯಲ್ಲಿ ಮಾರಕ ಕೊರೊನಾ ವೈರಸ್ ಸೋಂಕು ಕಂಡು ಬಂದಿದ್ದು, ಇವರ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಟ 400 ಮಂದಿಯಲ್ಲಿ ಮಾರಕ ಕೊರೊನಾ ವೈರಸ್ ಸೋಂಕು ಕಂಡು ಬಂದಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಅಂತೆಯೇ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ಇನ್ನೂ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲರನ್ನೂ ಹುಡುಕುವ ಕಾರ್ಯ ಭರದಿಂದ ಸಾಗಿದೆ. ನೂರಾರು ವೈದ್ಯಕೀಯ ಪರೀಕ್ಷೆಗಳ ವರದಿ ಬರಬೇಕಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭೆ ಬಳಿಕ ದೇಶಾದ್ಯಂತ ಹಂಚಿಹೋಗಿದ್ದಾರೆ. ತಮಿಳುನಾಡು ಒಂದರಲ್ಲೇ 173 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಬಹುತೇಕರು ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರೇ ಆಗಿದ್ದಾರೆ. ಪ್ರಸ್ತುತ ಮಸೀದಿಯಿಂದ 2000ಕ್ಕೂ ಅಧಿಕ ಮಂದಿಯನ್ನು ಹೊರಗೆ ಕಳುಹಿಸಿ ಮಸೀದಿ ತೆರವುಗೊಳಿಸಲಾಗಿದೆ. ಈ ಪೈಕಿ 1804 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 334 ಮಂದಿಯನ್ನು ಸೋಂಕು ಪತ್ತೆ ಹಿನ್ನೆಲೆ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗಡಿ ಬಂದ್‍ಗೆ ಹೆಚ್.ಡಿ. ದೇವೇಗೌಡ ಆಕ್ಷೇಪ
ಬೆಂಗಳೂರು, ಏ. 2: ಕರ್ನಾಟಕ-ಕೇರಳ ಗಡಿ ಪ್ರವೇಶ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ರ ಬರೆದಿದ್ದಾರೆ. ಕಾಸರಗೋಡುನಿಂದ ಮಂಗಳೂರಿಗೆ ಆಂಬುಲೆನ್ಸ್ ಮತ್ತು ಅಗತ್ಯ ಸಾಮಗ್ರಿಗಳ ಸಾಗಾಟ ಬಂದಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ನಿನ್ನೆ ಪತ್ರ ಬರೆದಿದ್ದರು. ಕಾಸರಗೋಡಿನ ಕನ್ನಡಿಗರು ಅನೇಕರು ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ. ತುರ್ತು ಸನ್ನಿವೇಶದಲ್ಲಿ ರಾಜ್ಯ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ. ಆದರೆ ಕರ್ನಾಟಕ ಸರ್ಕಾರ ತಮ್ಮ ಮನವಿಯನ್ನು ನಿರಾಕರಿಸಿದೆ. ರಾಜ್ಯ ಸರ್ಕಾರದ ಈನಡೆಯನ್ನು ತಾವು ಖಂಡಿಸುವುದಾಗಿ ಪತ್ರದಲ್ಲಿ ಹೇಳಿದ್ದಾರೆ. ಲಾಕ್‍ಡೌನ್ ಮೊದಲು ಪ್ರಧಾನಿಗಳೆ ಆಶ್ವಾಸನೆ ನೀಡಿದ, ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳಿಗೆ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಅದೇ ಅಗತ್ಯ ವಸ್ತುಗಳಿಗೆ ವ್ಯತ್ಯಯವಾಗುತ್ತಿದೆ. ಕಾಸರಗೋಡು ಹಾಗೂ ಮಂಗಳೂರು ಗಡಿ ವಿಚಾರದ ಬಗ್ಗೆ ಪ್ರಧಾನಿಗಳ ಗಮನ ಸೆಳೆಯಲು ಅವರಿಗೂ ಪತ್ರ ಬರೆದು ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುವು ಮಾಡಿ ಕೊಡಲು ಮನವಿ ಮಾಡುವುದಾಗಿ ಪಿಣರಾಯಿ ವಿಜಯನ್‍ಗೆ ಪತ್ರದಲ್ಲಿ ದೇವೇಗೌಡ ತಿಳಿಸಿದ್ದಾರೆ.
1 ವರ್ಷದ ವೇತನ ನೀಡಿದ ಶೆಟ್ಟರ್
ಹುಬ್ಬಳ್ಳಿ, ಏ. 2: ಮಾಜಿ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ರಾಜ್ಯದ ಕೋವಿಡ್-19 ಹಾವಳಿ ತಡೆ ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ. ತಾವು ದೇಣಿಗೆ ನೀಡುವ ವಿಚಾರವನ್ನು ಸಚಿವ ಶೆಟ್ಟರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಬಗೆಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಮಂದಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಉದಾರ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಮುನ್ನ ಬಸನಗೌಡ ಪಾಟೀಲ್ ಯತ್ನಾಳ್, ಸಚಿವರಾದ ಕೆ.ಎಸ್. ಈಶ್ವರಪ್ಪ ಸಹ ಕೊರೊನಾ ಪರಿಹಾರ ನಿಧಿಗೆ ನೆರವು ನೀಡಿದ್ದರು. ಬುಧವಾರ ಸಿಎಂ ಯಡಿಯೂರಪ್ಪ ಕೊರೊನಾ ಸಂಕಷ್ಟ ಪರಿಹಾರಕ್ಕೆ ತಮ್ಮ ಒಂದು ವರ್ಷದ ವೇತನ ನೀಡಿ ಉದಾರತೆ ಮೆರೆದಿದ್ದರು.
ಲಾಕ್‍ಡೌನ್ ವಿಸ್ತರಿಸುವ ಅಗತ್ಯವಿಲ್ಲ
ಬೆಂಗಳೂರು, ಏ. 2: ಲಾಕ್‍ಡೌನ್ ಅನ್ನು ಮತ್ತೆ ದೇಶಾದ್ಯಂತ ವಿಸ್ತರಿಸುವ ಅಗತ್ಯ ಇಲ್ಲ. ಅಗತ್ಯವಿರುವ ಕಡೆ ವಿಸ್ತರಿಸಬಹುದು ಎಂದು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಸತ್ಯಜಿತ್ ಮೇಯರ್ ಅವರು ಹೇಳಿದ್ದಾರೆ. ಹೆಚ್ಚು ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ ನಂತರ ನಮಗೆ ದೇಶದಲ್ಲಿನ ಟ್ರೆಂಡ್ ಸ್ಪಷ್ಟವಾಗಿ ತಿಳಿಯುತ್ತದೆ. ಐಸಿಎಂಆರ್ ತನ್ನ ಪರೀಕ್ಷಾ ಸಾಮಥ್ರ್ಯವನ್ನು ಸಾಕಷ್ಟು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಅದು ಸಂಪೂರ್ಣವಾಗಿ ಲಭ್ಯವಾದ ನಂತರ ಲಾಕ್‍ಡೌನ್ ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮವನ್ನು ಬೀರುತ್ತಿದೆಯೇ ಅಥವಾ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
383 ವಿಚಾರಣಾಧೀನ ಕೈದಿಗಳ ಬಿಡುಗಡೆ
ಬೆಂಗಳೂರು, ಏ. 2: ಕೋವಿಡ್-19 ವೈರಸ್ ಹರಡುವ ಆತಂಕದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 180 ಖೈದಿಗಳೂ ಸೇರಿ ರಾಜ್ಯದ ವಿವಿಧ ಜೈಲುಗಳಲ್ಲಿರುವ 383 ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪರಪ್ಪನ ಅಗ್ರಹಾರ ಸೇರಿ ವಿವಿಧ ಕಾರಾಗೃಹಗಳಲ್ಲಿನ 383 ಕೈದಿಗಳನ್ನು 2 ಹಂತಗಳಲ್ಲಿ ಬಿಡುಗಡೆ ಮಾಡಲಿದ್ದು, ಮೊದಲ ಹಂತದಲ್ಲಿ 7 ವರ್ಷದೊಳಗಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲಿಗೆ ಬಂದು ಇನ್ನೂ ವಿಚಾರಣೆ ಎದುರಿಸುತ್ತಿರವವರನ್ನು ಬಿಡುಗಡೆ ಮಾಡಲಾಗುತ್ತದೆ. ಕೊರೊನಾ ವೈರಸ್ ಖೈದಿಗಳಿಗೆ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಳೆದ ಮಾ. 23 ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.