ಕುಶಾಲನಗರ, ಏ. 2: ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದ ನಾಗರಿಕರಿಗೆ ಆಹಾರ ವಸ್ತುಗಳ ಕಿಟ್ ವಿತರಣೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಿದರು. ವಾಲ್ಮೀಕಿ ಸಮುದಾಯ ಭವನದಲ್ಲಿ ಕಿಟ್ ತಯಾರಿಕೆ ನಡೆಯುತ್ತಿದ್ದು ತಾಲೂಕಿನ 1500 ಜನರಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ ಶಾಸಕರು, ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಿಟ್ ವಿತರಣೆಗೆ ಸೂಚನೆ ನೀಡಲಾಗಿದೆ. ಈ ನಡುವೆ ಕೊರೊನಾ ತಡೆಗಟ್ಟುವ ಬಗ್ಗೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಮನೆಮನೆಗೆ ತರಕಾರಿ, ಹಣ್ಣು ಮತ್ತಿತರ ವಸ್ತುಗಳನ್ನು ಸರಬರಾಜು ಮಾಡಲು ತಾಲೂಕು ಆಡಳಿತ ಕ್ರಮಕೈಗೊಂಡಿದೆ. ಇದರೊಂದಿಗೆ ಇನ್ನೆರೆಡು ವಾಹನಗಳ ಮೂಲಕ ಪಟ್ಟಣದ ವಾರ್ಡ್‍ಗಳಿಗೆ ತರಕಾರಿ, ಹಣ್ಣು ಸರಬರಾಜಿಗೆ ಕ್ರಮಕೈಗೊಳ್ಳಲಾಗುವುದು ಎಂದು ರಂಜನ್ ತಿಳಿಸಿದರು.

ಕುಶಾಲನಗರ ಪಟ್ಟಣದ ಪ್ರಮುಖ ಬೀದಿಗಳ ಸ್ವಚ್ಛತೆಗೆ ಔಷಧಿ ಸಿಂಪಡಣೆ ಕಾರ್ಯಕ್ಕೆ ಶಾಸಕ ರಂಜನ್ ಕುಶಾಲನಗರ ಗಣಪತಿ ದೇವಾಲಯ ಬಳಿ ಚಾಲನೆ ನೀಡಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಯ ವಾಹನದಲ್ಲಿ ಸ್ಥಳೀಯ ಪಂಚಾಯ್ತಿ ಸಿಬ್ಬಂದಿಗಳ ಸಹಕಾರದೊಂದಿಗೆ ಎಲ್ಲೆಡೆ ರಾಸಾಯನಿಕ ಸಿಂಪಡಣೆ ಮಾಡಲಾಯಿತು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನಿಲ್, ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಪಪಂ ಸದಸ್ಯ ಅಮೃತ್‍ರಾಜ್, ಸ್ಥಳೀಯ ಪ್ರಮುಖರಾದ ಕೆ.ಜಿ.ಮನು, ನಿಡ್ಯಮಲೆ ದಿನೇಶ್, ಪುಂಡರೀಕಾಕ್ಷ, ವೈಶಾಖ್, ಶಿವಾಜಿ ಮತ್ತಿತರರು ಇದ್ದರು.