ಕೂಡಿಗೆ, ಏ. 2: ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದ ಸಮೀಪದಲ್ಲಿರುವ ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ತಗಲಿದ್ದು ಅಲ್ಲಿನ ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಪಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ನೇತೃತ್ವದಲ್ಲಿ ಕ್ಯಾಮೆರಾದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ.
ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಪರಿಣಾಮ ಎರಡನೇ ದಿನವೂ ಸಹ ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದ ವರು ವಾಹನ ಚಲಿಸುವ ಮಾರ್ಗದಲ್ಲಿ ತೆರಳಿ ಬೃಹತ್ ಮರಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿರುವುದು ಕಂಡು ಬರುತಿತ್ತು.
ಈ ವಾಹನದ ಜೊತೆಯಲ್ಲಿ ಮಿನಿ ಲಾರಿಯಲ್ಲಿ ಇಲಾಖೆಯವರು ನೀರು ಸಂಗ್ರಹಿಸಿ ಸಣ್ಣ ಯಂತ್ರದ ಮೂಲಕ ಸಹ ಪೊದೆಗಳ ಬೆಂಕಿ ಆರಿಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಯಡವನಾಡು ಮೀಸಲು ಪ್ರದೇಶದಲ್ಲಿ ಅಧಿಕಾರಿಗಳು ಮೊಕ್ಕಂ ಹೂಡಿದ್ದಾರೆ.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ಸೋಮವಾರಪೇಟೆ ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನೆಹರು, ವಲಯ ಅರಣ್ಯ ಅಧಿಕಾರಿ ಶರ್ಮಾ ಸೇರಿದಂತೆ ಸೋಮವಾರಪೇಟೆ ತಾಲೂಕಿನ ಎಲ್ಲಾ ಉಪವಲಯಾದ ಅಧಿಕಾರಿಗಳ ಹಾಗೂ ಮಡಿಕೇರಿ ತಾಲೂಕಿನ ವಿವಿಧ ಭಾಗಗಳ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾಲುಕಿತ್ತ ಕಾಡಾನೆಗಳು
ಯಡವನಾಡು ಅರಣ್ಯ ಪಶ್ಚಿಮ ಮೀಸಲು ಪ್ರದೇಶ ಹಾರಂಗಿ ಹಿನ್ನೀರಿನ ಪ್ರದೇಶವಾಗಿರುತ್ತದೆ ಅಲ್ಲದೆ ಈ ವ್ಯಾಪ್ತಿಯಲ್ಲಿ ಕಂಜೂರು ಸಜ್ಜಹಳ್ಳಿ ಮತ್ತು ಐಗೂರು ವ್ಯಾಪ್ತಿಯ ಪ್ರದೇಶಗಳಲ್ಲಿ ಹೆಚ್ಚು ಅರಣ್ಯ ಪ್ರದೇಶ ಇತ್ತು. ಆದರೆ ನಿನ್ನೆ ಅರಣ್ಯಕ್ಕೆ ಬೆಂಕಿ ತಗುಲಿದ ಸಂದರ್ಭದಲ್ಲಿ ಈ ಭಾಗದಲ್ಲಿದ್ದ ಕಾಡಾನೆಗಳು ಸಮೀಪದ ಅರಣ್ಯ ಪ್ರದೇಶದತ್ತ ಕಾಲುಕಿತ್ತಿವೆ.