ಮಡಿಕೇರಿ, ಏ. 1: ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದು; ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಗೆ ಗುರಿಯಾಗಿರುವ ಕಾರಾಗೃಹ ಬಂಧಿಗಳಿಗೆ ಮಾನವೀಯ ನೆಲೆಯಲ್ಲಿ; ತಾತ್ಕಾಲಿಕ ಬಿಡುಗಡೆ ಗೊಳಿಸಲು ದೇಶದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಉಚ್ಚನ್ಯಾಯಾಲಯ ಅವಕಾಶ ಕಲ್ಪಿಸಿದೆ. ಆ ಮೇರೆಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಹಾಗೂ ಕಾನೂನು ನೆರವು ಪ್ರಾಧಿಕಾರದಿಂದ 12 ಮಂದಿ ಬಂಧಿಗಳನ್ನು ತಾತ್ಕಾಲಿಕವಾಗಿ ಬಿಡಗಡೆಗೊಳಿಸಲಾಗಿದೆ.ಇಲ್ಲಿನ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣೆ ಎದುರಿಸುತ್ತಿರುವ ಬಂಧಿಗಳಿಗೆ ಆತ್ಮಸ್ಥೆರ್ಯ ತುಂಬುವ ದಿಸೆಯಲ್ಲಿ; ಅಲ್ಲಿನ ಸ್ಥಿರ ದೂರವಾಣಿ ಮೂಲಕ ಆರೋಪಿಗಳ ಕುಟುಂಬ ಸದಸ್ಯ ರೊಂದಿಗೆ ಮಾತುಕತೆಗೂ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಕೊರೊನಾ ಭೀತಿಯ ನಡುವೆ ವಿಚಾರಣಾ ಬಂಧಿಗಳು ಹಾಗೂ ಅಂತಹವರ ಕುಟುಂಬದ ಸದಸ್ಯರು ಪರಸ್ಪರ ಆತಂಕ ಅಥವಾ ಯಾವದೇ ಒತ್ತಡದಲ್ಲಿ ಸಿಲುಕದಂತೆ ಈ ರೀತಿ ಮುಂಜಾ ಗ್ರತಾ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಗೊತ್ತಾಗಿದೆ.(ಮೊದಲ ಪುಟದಿಂದ) ಭಾರತದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೊಡಗಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ. ಆ ಮೇರೆಗೆ ಈಗಾಗಲೇ 11 ಮಂದಿಗೆ ಷರತ್ತುಬದ್ಧವಾಗಿ ತಾತ್ಕಾಲಿಕ ಬಿಡುಗಡೆಗೊಳಿಸಲಾಗಿದೆ. ಇನ್ನು ಓರ್ವ ಖೈದಿಗೆ ಪೆರೋಲ್‍ನಲ್ಲಿ ಮನೆಗೆ ಕಳುಹಿಸಲಾಗಿದೆ. ಕಾರಾಗೃಹ ಬಂಧಿಗಳ ಕುಟುಂಬ ಸದಸ್ಯರು, ಕಾನೂನಿನ ನೆರವು ಬಯಸಿದರೆ; ಪೇಪರ್ ಅರ್ಜಿ ಮೂಲಕವೂ ನ್ಯಾಯಾಧೀಶರನ್ನು ಸಂಪರ್ಕಿಸಿ; ಅಗತ್ಯ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ : ಕಾರಾಗೃಹಕ್ಕೆ ಹೊಸದಾಗಿ ವಿಚಾರಣೆಯ ಸಂಬಂಧ ಸೇರ್ಪಡೆಗೊಳ್ಳುವವರಿಗೆ; ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ; 14 ದಿನಗಳ ತನಕ ವೈದ್ಯಕೀಯ ತಪಾಸಣೆ ಬಳಿಕ ಕೊರೊನಾ ಸೋಂಕು ಕಂಡುಬಾರದಿದ್ದರೆ ಮಾತ್ರ; ಇತರ ಬಂಧಿಗಳೊಂದಿಗೆ ಬೆರೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಮೂವರಿಗೆ ಪ್ರತ್ಯೇಕ ಕೊಠಡಿ : ಈ ಮೊದಲು ಕೊಂಡಂಗೇರಿಯ ಕೊರೊನಾ ಸೋಂಕು ಶಂಕಿತ ವ್ಯಕ್ತಿಯನ್ನು; ಸಂಪರ್ಕಿಸಿರುವ ಶಂಕೆ ಮೇರೆಗೆ; ಕಾರಾಗೃಹದಲ್ಲಿರುವ ಆ ವ್ಯಕ್ತಿಯ ಮೂವರು ಸಂಬಂಧಿಕರಿಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವದ ರೊಂದಿಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ವೈದ್ಯರು ಇವರಿಗೆ ಕೊರೊನಾ ಸೋಂಕು ನಿರಾಕರಿಸಿದ್ದಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ನ್ಯಾಯಾಧೀಶರ ಕಾಳಜಿ : ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ ಅವರ ನೇತೃತ್ವದಲ್ಲಿ; ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ನೂರುನ್ನಿಸಾ ಸೇರಿದಂತೆ ಇತರ ನ್ಯಾಯಾಧೀಶರು; ಕಾರಾಗೃಹ ಅಧೀಕ್ಷಕರ ಸಮ್ಮುಖದಲ್ಲಿ; ಅಲ್ಲಿನ ಬಂಧಿಗಳಿಗೆ ಆತ್ಮಸ್ಥೆರ್ಯ ತುಂಬುವಲ್ಲಿ ತೊಡಗಿಸಿಕೊಂಡಿದ್ದಾರೆ.

ಅಲ್ಲದೆ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಜಿಲ್ಲೆಯ ನ್ಯಾಯಾಂಗ ಇಲಾಖೆಯ ಭಿತ್ತಿಪತ್ರ ಇತ್ಯಾದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿದೆ; ಇನ್ನು ಅರೆಕಾಲಿಕ ಸ್ವಯಂಸೇವಕರನ್ನು ನೇಮಿಸಿಕೊಂಡು; ಅಲ್ಲಲ್ಲಿ ನಿರಕ್ಷಕ ಮಂದಿ ಹಾಗೂ ದುರ್ಬಲ ವರ್ಗಕ್ಕೆ ಆತ್ಮವಿಶ್ವಾಸ ತುಂಬುವ ಕಾರ್ಯ ವನ್ನು ನಿರ್ವಹಿಸುತ್ತಿದೆ ಎಂದು ಗೊತ್ತಾಗಿದೆ.

ಬಿಡುಗಡೆಯಾದವರು : ಪೆರೋಲ್‍ನಲ್ಲಿ ಜೆ.ಆರ್. ನಾಗರಾಜ್ ಬಿಡುಗಡೆಗೊಂಡಿದ್ದು; ಇತರ ಬಂಧಿಗಳಾದ ಮಣಿಕಂಠ, ವೈ.ಬಿ. ಸತೀಶ್, ಜಗನ್ನಾಥ್, ವಿನೋದ್, ಪದ್ಮ, ಅಶೋಕ್, ಸಯ್ಯದ್, ಸುಹೇಬ್ ಷರೀಫ್, ಆನಂದ, ತನ್ವಿರ್‍ಪಾಷಾ, ಧರ್ಮಲಿಂಗ ಎಂಬವರುಗಳು ತಾತ್ಕಾಲಿಕ ಬಿಡುಗಡೆಯೊಂದಿಗೆ ಕಾರಾಗೃಹ ದಿಂದ ಮನೆಗಳಿಗೆ ತೆರಳಿದ್ದಾರೆ. ಈ ಮೂಲಕ ಕಾರಾಗೃಹದೊಳಗೆ ಬಂಧಿಗಳ ನಡುವೆ ಕಿಷ್ಕಿಂಧೆ ತಪ್ಪಿಸಲು ಮತ್ತು ಸಾಂಕ್ರಮಿಕ ರೋಗ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆಯು ಬಂಧಿಖಾನೆ ಸಿಬ್ಬಂದಿಗಳೊಂದಿಗೆ ಸಹಕಾರಕ್ಕೆ ಮುಂದಾಗಿದ್ದಾರೆ.