ಮಡಿಕೇರಿ, ಮಾ. 30: ಕಳೆದೆರಡು ದಿನಗಳಿಂದ ಊಟ ಮಾಡದೆ ಕಂಗಾಲಾಗಿದ್ದ ಜೀವಗಳಿಗೆ ಜಿಲ್ಲಾ ಪೊಲೀಸರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗದ ಪ್ರದೇಶದಲ್ಲಿ ಪ್ಲಾಸ್ಟಿಕ್ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಐಹೊಳೆಯ 11 ಕಾರ್ಮಿಕರು ಇಕ್ಕಟ್ಟಿಗೆ ಸಿಲುಕ್ಕಿದ್ದರು. ದೂರದ ಊರಿನಿಂದ ಜಿಲ್ಲೆಗೆ ಕೆಲಸ ಅರಸಿ ಬಂದ ಇವರು ಇದೀಗ ಎಲ್ಲಿಗೆ ಹೋಗುವುದು, ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಯ ನಡುವೆ ಬದುಕು ಸಾಗಿಸುತ್ತಿದ್ದಾರೆ.

ಲಾಕ್‍ಡೌನ್ ಸ್ಥಿತಿಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಕೆಲಸದ ಒತ್ತಡದ ನಡುವೆ ಪೊಲೀಸರು ಹಸಿದ ಜೀವಗಳಿಗೆ ಊಟ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.

ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆ ತಿಳಿದರು. ನಂತರ ಮಧ್ಯಾಹ್ನಕ್ಕೆ ಅನ್ನ, ಸಾಂಬಾರು, ವಡೆ ನೀಡಿ ಹಸಿವು ತಣಿಸಿದರು.

ಇದರೊಂದಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಯ ಪ್ಯಾಕೇಜ್ ನೀಡಿದರು. ಪೊಲೀಸರ ಕಾರ್ಯಕ್ಕೆ ಹಸಿವಿನಲ್ಲಿದ್ದ ಕಾರ್ಮಿಕರು ಖುಷಿಪಟ್ಟರು.

11 ಕಾರ್ಮಿಕರು ತಮ್ಮ ಸ್ವಂತ ಊರು ಶಿವಮೊಗ್ಗಕ್ಕೆ ಹೋಗಲು ಬಯಸಿದ್ದು, ಸಿಪಿಐ ಅನೂಪ್ ಮಾದಪ್ಪ, ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಊರಿಗೆ ತೆರಳುವವರೆಗೆ ಅಗತ್ಯ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು.