ಮಡಿಕೇರಿ, ಮಾ. 30: ಸೋಮವಾರವಾದ ಇಂದು ಬೆಳಿಗ್ಗೆ 6 ಗಂಟೆಯಿಂದ ಹಗಲು 12 ಗಂಟೆಯ ತನಕ; ಜಿಲ್ಲಾಡಳಿತ ನಿರ್ಬಂಧ ಸಡಿಲಗೊಳಿಸಿದ್ದ ಬೆನ್ನಲ್ಲೇ; ಜನತೆ ಬೀದಿಗೆ ಇಳಿಯುವದ ರೊಂದಿಗೆ; ಅಗತ್ಯ ವಸ್ತುಗಳ ಖರೀದಿ ಹಾಗೂ ಬ್ಯಾಂಕ್ ವ್ಯವಹಾರ ಪೂರೈಸಿ ಕೊಂಡರು. ಕೊರೊನಾ ಭಯದ ನಡುವೆಯೂ ಬೆಳ್ಳಂಬೆಳಿಗ್ಗೆ ಮನೆ ಗಳಿಂದ ಹೊರ ಬಂದ ನಾಗರಿಕರು; ಹಾಲು, ಹಣ್ಣು, ತರಕಾರಿ, ದಿನಪತ್ರಿಕೆ, ಔಷಧಿ, ದಿನಸಿ ಇತ್ಯಾದಿಗಳನ್ನು ಸರದಿಯಲ್ಲಿ ಅಂತರ ಕಾಯ್ದುಕೊಂಡು ಖರೀದಿಸಿದ್ದು ಕಂಡು ಬಂತು. ಅಂತೆಯೇ ಬ್ಯಾಂಕ್‍ಗಳ ಎದುರು ಸಾಲಾಗಿ ಬಂದು ಹಣಕಾಸು ವ್ಯವಹಾರ ನಡೆಸಿದ ಚಿತ್ರಣ ಎದುರಾಯಿತು.ಮುಖ್ಯವಾಗಿ ಇಲ್ಲಿನ ರಾಜ್ಯಸಾರಿಗೆ ಬಸ್ ನಿಲ್ದಾಣ ದಲ್ಲಿಯೂ; ತರಕಾರಿ ವ್ಯಾಪಾರ ವ್ಯವಸ್ಥೆ ಮಾಡಲಾಗಿತ್ತು. ಹೀಗಿದ್ದು ನಿತ್ಯ ಗ್ರಾಹಕರು ತಮ್ಮ ತಮ್ಮ ಪರಿಚಿತ ವರ್ತಕರ ಮಳಿಗೆಗಳಿಗೆ ತೆರಳಿ ಗಂಟೆಗಳ ಸರದಿಯೊಂದಿಗೆ ವಸ್ತುಗಳನ್ನು ಖರೀದಿಸಿದ್ದು; ಇಂದು ಮಧ್ಯಾಹ್ನ 12 ಗಂಟೆಯ ತನಕ ಎಲ್ಲಿಯೂ ಪೊಲೀಸ್ ಇಲಾಖೆ ಕೂಡ ವಿನಾಕಾರಣ ನಿಯಂತ್ರಣ ಗೊಳಿಸದೆ; ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತು.ವಾಹನ ದಟ್ಟಣೆ : ಮಡಿಕೇರಿ ನಗರದ ಬಹುತೇಕ ಕಡೆಗಳಲ್ಲಿ ಶುಕ್ರವಾರದ ಸಂತೆದಿನದಂತೆ ವಾಹನ ದಟ್ಟಣೆ ಕಂಡು ಬಂತು; ರಾಜ್ಯ ಸಾರಿಗೆ, ಖಾಸಗಿ ಬಸ್‍ಗಳ ಓಡಾಟವಿಲ್ಲ ದಿದ್ದರೂ ಜನರು ಆಟೋರಿಕ್ಷಾ, ಖಾಸಗಿ ವಾಹನ, ದ್ವಿಚಕ್ರ ವಾಹನಗಳಲ್ಲಿ ತಮ್ಮ ಕೆಲಸಗಳಿಗೆ ಧಾವಿಸಿದ್ದರಿಂದ ಜ. ತಿಮ್ಮಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಹಳೆಯ ಬಸ್‍ನಿಲ್ದಾಣ, ಕಾಲೇಜು ರಸ್ತೆ, ಮಹದೇವಪೇಟೆ ಮುಂತಾದೆಡೆಗಳಲ್ಲಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಶ್ರಮಿಸುತ್ತಿದ್ದ ದೃಶ್ಯ ಎದುರಾಯಿತು.
ಔಷಧಿ ಸಿಂಪಡಣೆ : ಮಧ್ಯಾಹ್ನದ ಹೊತ್ತಿಗೆ ಜಿಲ್ಲಾಡಳಿತದ ವಿಧಿಸಿದ 12 ಗಂಟೆಯ ಸಮಯ ಮುಗಿಯುತ್ತಿ ದ್ದಂತೆಯೇ ಪೊಲೀಸರು ಜನತೆಯನ್ನು ಚದುರಿಸಿ; ಅಂಗಡಿಗಳ ವ್ಯವಹಾರ ಸ್ಥಗಿತಗೊಳಿಸಿದರೆ; ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಚಂದನ್ ನೇತೃತ್ವದಲ್ಲಿ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದಿಂದ ಎಲ್ಲೆಡೆ ಔಷಧಿ ಸಿಂಪಡಿಸುವ ಮೂಲಕ ರೋಗಾಣು ಗಳು ಅಥವಾ ಕ್ರಿಮಿಕೀಟಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಯಿತು.
ಅಲ್ಲಲ್ಲಿ ವ್ಯಾಪಾರ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ; ಸೋಮವಾರಪೇಟೆಯಲ್ಲಿ ಸಂತೆ ದಿನವಾದ್ದರಿಂದ ತಾಲೂಕು ಕೇಂದ್ರ ಹಾಗೂ ಕುಶಾಲನಗರ, ಗೋಣಿಕೊಪ್ಪಲು, ನಾಪೋಕ್ಲು, ವೀರಾಜಪೇಟೆ, ಪೊನ್ನಂಪೇಟೆ, ಸುಂಟಿಕೊಪ್ಪ, ಶನಿವಾರಸಂತೆ, ಕೊಡ್ಲಿಪೇಟೆ, ಸಿದ್ದಾಪುರ, ಶಿರಂಗಾಲ, ಕೂಡಿಗೆ, ಪಾಲಿಬೆಟ್ಟ, ಅಮ್ಮತ್ತಿ, ಶ್ರೀಮಂಗಲ, ಬಾಳೆಲೆ ಮುಂತಾದೆಡೆಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಅಗತ್ಯ ವಸ್ತುಗಳ ಕೊಳ್ಳುವಲ್ಲಿ ಕಾಣಿಸಿಕೊಂಡರು.
ಒಟ್ಟಿನಲ್ಲಿ ಕೊಡಗಿನ ಮಟ್ಟಿಗೆ ದಕ್ಷಿಣದ ಕುಟ್ಟದಿಂದ ಉತ್ತರ ಕೊಡಗಿನ ಕೊಡ್ಲಿಪೇಟೆ, ಸಂಪಾಜೆ ಗಡಿ ಸಹಿತ ಜಿಲ್ಲೆಯ ಉದ್ದಗಲಕ್ಕೂ ನಾಡಿನ ಜನತೆ ಅಲ್ಲಲ್ಲಿ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ; ಜಿಲ್ಲಾಡಳಿತದ ನಿರ್ಬಂಧಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತಿರುವುದು ಗೋಚರಿಸತೊಡಗಿದೆ.
ಶಾಸಕರ ಮನವಿ : ಈ ಸಂಬಂಧ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೂಡ ಸಾರ್ವಜನಿಕರಿಗೆ ಮನವಿಯೊಂದಿಗೆ; ಯಾರೂ ಜಿಲ್ಲಾಡಳಿತದ ಆದೇಶ ಉಲ್ಲಂಘಿಸದಂತೆ ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ನಿಗದಿತ ಸಮಯದೊಳಗೆ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಕಳಕಳಿ ವ್ಯಕ್ತಪಡಿಸಿ ದ್ದಾರೆ. ಈ ದಿಸೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಹಿತ ತಾಲೂಕು ಹಾಗೂ ಹೋಬಳಿ
(ಮೊದಲ ಪುಟದಿಂದ) ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ : ಈ ನಡುವೆ ಇಂದು ಕೊಡಗು ಪೊಲೀಸ್ ಹಾಗೂ ನಗರಸಭೆ ಮತ್ತು ಆಯಾ ಪಂಚಾಯಿತಿ ಹಂತದಲ್ಲಿ ಪ್ರಮುಖ ಐದು ಕಡೆಗಳಲ್ಲಿ ಹಸಿದವರಿಗೆ ಊಟದ ನೆರವಿಗಾಗಿ ಪೆಟ್ಟಿಗೆಗಳನ್ನು ಇರಿಸಿದ್ದು; ಇದಕ್ಕೆ ಸ್ಪಂದನ ಲಭಿಸಿದೆ; ಈ ವ್ಯವಸ್ಥೆ ಈಗಷ್ಟೇ ಜನತೆಗೆ ಪರಿಚಯವಾಗುತ್ತಿದ್ದು; ಮುಂದಿನ ದಿನಗಳಲ್ಲಿ ಉತ್ತಮ ಸ್ಪಂದನ ಲಭಿಸುವ ಆಶಯವಿದೆ. ಈ ರೀತಿ ದೊರಕುವ ನೆರವಿನಿಂದ ಆಯಾ ವ್ಯಾಪ್ತಿಯ ಸ್ಥಳೀಯ ಆಡಳಿತದಿಂದ; ತೀರಾ ಬಡವರು, ನಿರ್ಗತಿಕರಿಗೆ ಹಸಿವು ನೀಗಲು ಕ್ರಮ ವಹಿಸಲಾಗುವದು ಎಂದು ಸಂಬಂಧಿಸಿದವರು ತಿಳಿಸಿದ್ದಾರೆ.