ಪ್ರಪಂಚವೇ ತನ್ನ ಅಂಗೈಯಲ್ಲಿದೆ ಎಂದು ಅಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯ ತನ್ನ ನಗ್ನ ನೇತ್ರಗಳಿಗೆ ಕಾಣದ ವೈರಾಣುವಿಗೆ ಹೆದರಿ ಮನೆಯೊಳಗೆ ಅವಿತು ಕೂರೋ ಪರಿಸ್ಥಿತಿ ಬಂದೊದಗಿದೆ.
ಹೌದು ನಾನೇ... ನನ್ನಿಂದಲೇ... ಎಂದು ಬೀಗುತ್ತಾ ಬುದ್ದಿ ಜೀವಿಯೆನಿಸಿ ಕೊಂಡಿದ್ದ ಮನುಷ್ಯನಿಗೆ ಕೊರೊನಾ ಎಂಬ ಸೂಕ್ಷ್ಮಾಣು ಜೀವಿಯೆದುರು ತಾನೇನೂ ಅಲ್ಲ ಎಂಬ ಅರಿವು ಮೂಡತೊಡಗಿದೆ. ಆದರೂ ತನ್ನ ಅಹಂ ಕಡಿಮೆ ಆದಂತೆ ಕಾಣುತ್ತಿಲ್ಲ. ಕಾರಣ ನನಗೆ ಜ್ವರ, ಗಂಟಲು ನೋವು, ಮೂಗು ಸೋರುವಿಕೆ, ಸೀನು, ಕೆಮ್ಮು ಯಾವುದೂ ಇಲ್ಲ. ನಾನು ‘ಸೇಫ್’ ಎಂಬ ದುರಹಂಕಾರ ಮೂಡಿದಂತಿದೆ. ಆದರೆ ತನಗರಿವಿಲ್ಲದೆ ತನ್ನೊಳಗೆ ಪ್ರವೇಶ ಪಡೆದ ವೈರಾಣು ಸದ್ದಿಲ್ಲದೆ ತನ್ನ ಕೆಲಸ ಪ್ರಾರಂಭ ಮಾಡಿರುವುದು ಆತನ ಗಮನಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿರುತ್ತೆ ಎನ್ನುವುದು ಆತನಿಗರಿವಿಲ್ಲದ ಕಟು ಸತ್ಯ. ಅದನ್ನರಿತರೂ ತನ್ನ ಅಹಂ ಅದನ್ನು ಒಪ್ಪಲು ಬಿಡುತ್ತಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಹಾಗಾಗಿ ತನ್ನ ಎದೆಗಾರಿಕೆ, ಹುಂಬುತನ, ಹುಚ್ಚುತನ ಮೆರೆಯುತ್ತಿದ್ದಾನೆ. ಕೊರೊನಾ ಮಹಾಮಾರಿಯ ರಣ ಕೇಕೆಯೆದುರು ಬಲಿಷ್ಠ ರಾಷ್ಟ್ರಗಳೆಲ್ಲವೂ ಮಂಡಿಯೂರಿ ನಿಂತಿವೆ. ಇಟಲಿ ಅಧ್ಯಕ್ಷ ತನ್ನ ದೇಶದ ಜನತೆಯ ಸಾವಿರ ಸಾವಿರ ಸಾವು ಕಂಡು ಕಣ್ಣೀರಿಟ್ಟಿರುವುದು ನೋಡುತ್ತಿದ್ದರೆ ಕೊರೊನಾ ರೌದ್ರ ನರ್ತನ ಹೇಗಿರುತ್ತದೆ ಎಂಬುದನ್ನು ಊಹಿಸಬಹುದಾಗಿದೆ.
ಹೌದು, ಆರ್ಥಿಕವಾಗಿ ಸದೃಢವಾಗಿದ್ದ ಘಟಾನುಘಟಿ ರಾಷ್ಟ್ರಗಳು ಕೊರೊನಾ ವೈರಸ್ನ ಕಬಂಧ ಬಾಹುವಿನಲ್ಲಿ ನರಳುತ್ತಿರುವ ತಮ್ಮ ದೇಶದ ಪ್ರಜೆಗಳ ಜೀವ ಉಳಿಸಲು ಸಾಧ್ಯವಾಗದೆ ಕೈಚೆಲ್ಲಿ ನಿಂತಿವೆ. ಅಮೇರಿಕಾ, ಸ್ಪೇನ್, ಇರಾನ್, ಇರಾಕ್, ಸೌದಿ ಅರೇಬಿಯಾ, ದುಬೈ, ಸೇರಿದಂತೆ ಆರ್ಥಿಕ ಸದೃಢತೆ ಹೊಂದಿದ ದೇಶಗಳು ಕೂಡಾ ಮಹಾಮಾರಿಯ ಅಟ್ಟಹಾಸದೆದುರು ಮೌನವಾಗಿವೆ. ಆದರೆ ನಮಗಿನ್ನೂ ಅದರ ಅರಿವು ಮೂಡದೆ ಇರುವುದು ವಿಷಾದÀನೀಯ ಹಾಗೂ ಖೇದಕರ ವಿಚಾರವಾಗಿದೆ.
ಚೀನಾ ದೇಶದಲ್ಲಿ ಕೊರೊನಾ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಿದ್ದ ಸಂದರ್ಭದಲ್ಲಿಯೇ ಎಚ್ಚೆತ್ತುಕೊಂಡ Wಊಔ ಭಾರತಕ್ಕೆ ಎಚ್ಚರಿಕೆಯ ಕರೆ ಗಂಟೆ ಬಾರಿಸಿತ್ತು. ಕಾರಣ ಚೀನಾದಂತೆಯೇ ವಿಶ್ವದಲ್ಲಿ ಅತೀ ಹೆಚ್ಚು ಜನ ಸಾಂದ್ರತೆ ಹೊಂದಿರುವ ಭಾರತಕ್ಕೇನಾದರೂ ಕೊರೊನಾ ಲಗ್ಗೆಯಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಕಟ್ಟುನಿಟ್ಟಿನ ಸಂದೇಶ ರವಾನೆ ಮಾಡಿತ್ತು. ಆದರೆ ಅದನ್ನು ನಮ್ಮ ದೇಶ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಫಲವಾಗಿ ಇಂದು ಈ ಸ್ಥಿತಿಗೆ ಬಂದು ನಿಂತಿದೆ. ದೇಶಕ್ಕೆ ಕೊರೊನಾ ಪ್ರವೇಶ ಪಡೆಯುವ ವಾಯುಮಾರ್ಗದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿತ್ತು. ಭಾರತದ ಪ್ರತಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಭಾರತೀಯರು ಮತ್ತು ವಿದೇಶಿಯರನ್ನು 14 ದಿನಗಳ ಕಾಲ ನಿರೀಕ್ಷಣೆಯಲ್ಲಿಟ್ಟು ಮತ್ತೆ ಮನೆಗೆ ಕಳುಹಿಸುವ ಕಠಿಣ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಹಾಕಿತ್ತು ಎಂಬ ಗಾದೆಯಂತೆ ನಮ್ಮ ದೇಶಕ್ಕೆ ಕೊರೊನಾ ಎಂಟ್ರಿ ಕೊಟ್ಟ ಮೇಲೆ ನಾವು ಎಚ್ಚೆತ್ತುಕೊಳ್ಳುವಂತಾಗಿದೆ. ಇನ್ನು ವಿದೇಶದಿಂದ ಬಂದವರ ಮೇಲೆ ನಿಗಾಇಡುವ ಕ್ರಮ ಕೂಡಾ ಸಮರ್ಪಕ ಆಗಲೇ ಇಲ್ಲ. ಕೇವಲ ವಿದೇಶದಿಂದ ಬಂದವರನ್ನು ಮನೆಯಲ್ಲಿ ಕೂಡಿ ಹಾಕಿ ಆತನ ಮನೆಯವ ರನ್ನು ಹೊರಗಡೆ ಸುತ್ತಾಡಲು ಬಿಡುವುದೆಂದರೆ ಏನದರ ಅರ್ಥ? ಕೇವಲ ವಿದೇಶದಿಂದ ಬಂದ ವ್ಯಕ್ತಿ ಮಾತ್ರ ಸೋಂಕು ಹರಡುತ್ತಾನಾ? ಆತನ ಮನೆಯವರು ಪಟ್ಟಣದೆಲ್ಲೆಡೆ ಸುತ್ತಾಡುವಾಗ ಸಮಸ್ಯೆ ಆಗಲ್ವಾ? ಇಷ್ಟೊಂದು ಗಂಭೀರವಾದ ವೈರಸ್ ಅನ್ನು ಲಘುವಾಗಿ ಕಂಡಿದ್ದು ತಪ್ಪಲ್ಲವೇ ?
ಏನೇ ಆದರೂ ನಮ್ಮ ವ್ಯವಸ್ಥೆಗಳ ಅಜಾಗರೂಕತೆಯಿಂದಾಗಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅದರ ಪರಿಣಾಮವಾಗಿ ಇಂದು ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಆದರೆ ನಮ್ಮ ದೇಶದ ಜನ ಮಾತ್ರ ಜನ ಜಾಗೃತ ಗೊಳ್ಳುತ್ತಿಲ್ಲ. ಇದರ ಗಾಂಭೀರ್ಯತೆ ಅರಿತೇ ದೇಶದ ಪ್ರಧಾನಿ ನರೇಂದ್ರ ಮೋದಿ 21 ದಿನ ದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಿ ಕಠಿಣ ನಿರ್ಧಾರಕ್ಕೆ ಬಂದಿರುವಂತಹದ್ದು. ಆದರೆ ನಮ್ಮ ಜನಕ್ಕೆ ಇನ್ನೂ ಬುದ್ದಿ ಬಂದಂತೆ ತೋಚುತ್ತಿಲ್ಲ. ಒಬ್ಬ ಸೋಂಕಿತ ವ್ಯಕ್ತಿಯಲ್ಲಿ ಅದರ ಲಕ್ಷಣಗಳು ಕಾಣಬೇಕಾದರೆ 10 ರಿಂದ 14 ದಿನ ಕಾಯಲೇಬೇಕು. ಅದರ ಮಧ್ಯೆ ಆತ ಸಂಪರ್ಕ ಹೊಂದಿದ ವ್ಯಕ್ತಿಗಳಿಗೂ ಸೋಂಕು ಹರಡುವುದು ಖಚಿತ. ಹೀಗಾಗಿ 21 ದಿನ ಎಲ್ಲರೂ ಮನೆಯೊಳಗೆ ಕೂರಿ. ನಿಮ್ಮಲ್ಲಿ ಸೋಂಕು ಇದ್ದರೆ ಮನೆಯೊಳಗಿದ್ದವರಿಗೆ ಮಾತ್ರ ಅದರ ಪರಿಣಾಮ ಬೀರಲಿದೆ. ಹಾಗಾಗಿ ಚಿಕಿತ್ಸೆ ನೀಡಲು ಸಹಕಾರಿ ಆಗಲಿದೆ. ಮಾತ್ರವಲ್ಲ, ಸೋಂಕಿತ ವ್ಯಕ್ತಿಯ ಸ್ಪರ್ಶವಾದ ಕಡೆ ರೋಗಾಣು ಬಹು ಗಂಟೆಗಳ ಕಾಲ ಬಾಳಬಲ್ಲದು. ಜನರ ಓಡಾಟ ಇಲ್ಲದೆ ಇದ್ದರೆ ಅದರ ಕಾಲಾವಧಿ ಮುಗಿದ ಬಳಿಕ ಸೋಂಕು ನಾಶವಾಗಲಿದೆ. ಆ ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮೋದಿ ಕರೆಕೊಟ್ಟು ತಮಗೆ ತಾವೇ ಲಕ್ಷ್ಮಣ ರೇಖೆ ಹಾಕಿಕೊಳ್ಳುವಂತೆ ಸೂಚಿಸಿದ್ದರು. ಆದರೆ ನಾವು ಲಕ್ಷ್ಮಣ ರೇಖೆ ದಾಟಿ ನಮ್ಮ ಹುಂಬುತನವೆಂಬ ಮರೀಚಿಕೆ ಹಿಂದೆ ಓಡ್ತಾ ಇದ್ದೇವೆ. ತನ್ನ ಗುಂಡಿ ತಾನೇ ತೋಡಿಕೊಳ್ಳೋ ಹುಚ್ಚು ಸಾಹಸವದು ಎಚ್ಚರವಿರಲಿ. ಇಲ್ಲ ಅಂದರೆ ಅಪಾಯ ಕಟ್ಟಿಟ್ಟ ಬುತ್ತಿ.
-ಎಂ. ಎ. ಅಜೀಜ್, ಸಿದ್ದಾಪುರ.