ಕಾರ್ಮಿಕರ ಖಾತೆಗೆ ರೂ. 611 ಕೋಟಿ ವರ್ಗಾವಣೆ
ಲಖನೌ, ಮಾ. 30: 21 ದಿನಗಳ ಲಾಕ್‍ಡೌನ್ ಹಿನ್ನೆಲೆ ದಿನಗೂಲಿ ಕೆಲಸಗಾರರು ಕಂಗಲಾಗಿದ್ದರು. ಇದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ನರೇಗಾ ಯೋಜನೆಯಡಿ 27.5 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರೂ. 611 ಕೋಟಿ ವರ್ಗಾಹಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಪತ್ತೆಯಾಗಿರುವ 75 ಕೊರೊನಾ ಪ್ರಕರಣಗಳ ಬಗ್ಗೆ ಚರ್ಚಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1071ಕ್ಕೇರಿದ್ದು ಸಾವಿನ ಸಂಖ್ಯೆ 31ಕ್ಕೇರಿದೆ.
ಕೊರೊನಾ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆ
ಬೆಂಗಳೂರು, ಮಾ. 30: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಮವಾರ ನಂಜನಗೂಡಿನಲ್ಲಿ ನಾಲ್ಕು ಮತ್ತು ತುಮಕೂರಿನಲ್ಲಿ ಒಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ನಂಜನಗೂಡಿನಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ನಾಲ್ಕು ಜುಬಿಲೆಂಟ್ ಕಾರ್ಖಾನೆಯ ಕಾರ್ಮಿಕನೊಂದಿಗೆ ನೇರ ನಂಟು ಹೊಂದಿವೆ. ಇದರೊಂದಿಗೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 4 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ. ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳಿಗೆ, ದಿನಸಿ ಪದಾರ್ಥ ತರೋ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ರದ್ದು ಮಾಡಲಾಗಿದೆ. ನಂಜನಗೂಡು ಪಟ್ಟಣದಿಂದ ಯಾರು ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂದಿ ಹಾಕಿದ್ದು, ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ. ಮೈಸೂರಿನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಅಮಾನವೀಯವಾಗಿ ಕಾರ್ಮಿಕರಿಗೆ ಕೆಮಿಕಲ್ ಸ್ಪ್ರೇ
ಲಖನೌ, ಮಾ. 30: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವುದಕ್ಕಾಗಿ 21 ದಿನಗಳ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಇದರಿಂದ ಕಂಗೆಟ್ಟ ವಲಸೆ ಕಾರ್ಮಿಕರು ಭೀತಿಯಿಂದ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ. ಹೀಗೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ಆಗಮಿಸಿದ ವಲಸೆ ಕಾರ್ಮಿಕರನ್ನು ರಸ್ತೆಯಲ್ಲೆ ಸಾಮೂಹಿಕವಾಗಿ ಕೆಮಿಕಲ್ ಸ್ಪ್ರೇ ಮಾಡಿದ ಅಮಾನವೀಯ ಘಟನೆ ನಡೆದಿದೆ. ಬರೇಲಿ ಸಮೀಪ ಆಗಮಿಸಿದ ನೂರಾರು ಕಾರ್ಮಿಕರನ್ನು ತಡೆದ ಅಧಿಕಾರಿಗಳು, ಅವರನ್ನು ರಸ್ತೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿ, ಬಟ್ಟೆ ಮತ್ತು ವಸ್ತುಗಳ ಸಮೇತ ಸ್ಯಾನಿಟೈಸರ್ ಮೂಲಕ ಸ್ನಾನ ಮಾಡಿಸಲಾಗಿದೆ. ಕೊರೊನಾ ಸೋಂಕು ತಡೆಯುವುದಕ್ಕಾಗಿ ನಾವು ಹೀಗೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಮ್ಮ ಅಮಾನವೀಯ ಕೃತ್ಯ ಸಮರ್ಥಿಸಿಕೊಂಡಿದ್ದು, ಅವರನ್ನು ಸ್ಯಾನಿಟೈಸರ್ ಮಾಡಿದ ಬಳಿಕ ಜಿಲ್ಲಾ ಗಡಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಹೀಗೆ ಸ್ಪ್ರೇ ಮಾಡುವುದರಿಂದ ಕಾರ್ಮಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.
13 ವರ್ಷದ ಬಾಲಕನಲ್ಲಿ ಸೋಂಕು
ತುಮಕೂರು, ಮಾ. 30: ಇತ್ತೀಚೆಗಷ್ಟೇ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಶಿರಾ ಪಟ್ಟಣದ ವೃದ್ಧನ 13 ವರ್ಷದ ಮಗನಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಎರಡನೇ ಪ್ರಕರಣ ಖಚಿತಗೊಂಡಿದೆ. ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಶಿರಾದ 60 ವರ್ಷದ ವಯಸ್ಸಿನ 13 ವರ್ಷದ ವಯಸ್ಸಿನ ಮಗನಿಗೆ ಸೋಂಕು ತಗುಲಿದ್ದು, ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಬಾಲಕನನ್ನು ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ವೃದ್ಧನೊಂದಿಗೆ ಸಂಪರ್ಕದಲ್ಲಿದ್ದವರಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಕಂಡುಬಂದಿದೆ ಎಂದರು.