ಸೋಮವಾರಪೇಟೆ, ಮಾ.29: ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿರುವದರಿಂದ ಸೋಮವಾರದಂದು ಪಟ್ಟಣಕ್ಕೆ ಆಗಮಿಸುವ ವರ್ತಕರು ಹಾಗೂ ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಮಾರ್ಕಿಂಗ್ ಮಾಡಲಾಗಿದೆ.

ಇಲ್ಲಿನ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಸಂತೆ ಆವರಣ ಹಾಗೂ ದಿನಸಿ, ತರಕಾರಿ, ಮೆಡಿಕಲ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳ ಎದುರು 1 ಮೀಟರ್ ಅಂತರದಂತೆ ಮಾರ್ಕಿಂಗ್ ಮಾಡಲಾಗಿದ್ದು, ಪಟ್ಟಣಕ್ಕೆ ಆಗಮಿಸುವ ಮಂದಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಿಬ್ಬಂದಿಗಳು ಹಾಗೂ ಪೊಲೀಸ್ ಪೇದೆ ಶಿವಕುಮಾರ್ ಅವರುಗಳ ಉಸ್ತುವಾರಿಯಲ್ಲಿ ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟುಗಳ ಎದುರು ಮಾರ್ಕಿಂಗ್ ಮಾಡಲಾಗಿದ್ದು, ವರ್ತಕರು ಹಾಗೂ ಗ್ರಾಹಕರು ಈ ಮಾರ್ಕಿಂಗ್‍ನಲ್ಲಿಯೇ ನಿಂತು ಖರೀದಿಸಬೇಕಾಗಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆಯ ಎರಡು ಸ್ಥಳಗಳಲ್ಲಿ ತರಕಾರಿ ಸೇರಿದಂತೆ ಇನ್ನಿತರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಕ ಉದಯಕುಮಾರ್ ತಿಳಿಸಿದ್ದಾರೆ.

ಮನೆ ಮನೆಗೆ ತರಕಾರಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಜನದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದ್ದು, 2 ವಾಹನದಲ್ಲಿ ಪಟ್ಟಣದ ಸುತ್ತಮುತ್ತ ತರಕಾರಿ ವ್ಯಾಪಾರ ಮಾಡಲು ವರ್ತಕರಿಗೆ ತಹಶೀಲ್ದಾರ್ ಗೋವಿಂದರಾಜು ಅವರು ಅನುಮತಿ ನೀಡಿದರು.

ಮೈಸೂರು ಎಪಿಎಂಸಿಯ ತರಕಾರಿ ಮಾರಾಟ ದರದಂತೆ ವ್ಯಾಪಾರವನ್ನು ಮಾಡಬೇಕಾಗಿದೆ. ವ್ಯಾಪಾರಸ್ಥರು ಪೊಲೀಸ್ ಠಾಣೆಗೆ ತೆರಳಿ ತರಕಾರಿಗಳ ದರ ಪಟ್ಟಿಯನ್ನು ಪ್ರತಿ ದಿನ ಪಡೆದು, ವಾಹನದಲ್ಲಿ ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು. ಗ್ರಾಹಕರಿಂದ ಅಧಿಕ ದರ ಪಡೆದುಕೊಂಡರೆ ಕ್ರಮ ಜರುಗಿಸಲಾಗುವದು ಎಂದು ವ್ಯಾಪಾರಸ್ಥರಿಗೆ ಎಚ್ಚರಿಸಿದರು.

ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ವಾಹನಗಳಲ್ಲಿ ಮಾತ್ರ ತರಕಾರಿ ಮಾರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ದಿನಸಿ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗುವದು. ಇದರಿಂದ ಜನರ ಓಡಾಟ ತಪ್ಪಿಸಬಹುದಾಗಿದೆ ಎಂದು ಗೋವಿಂದರಾಜು ಅಭಿಪ್ರಾಯಿಸಿದರು.

ದಿನಸಿ ಅಂಗಡಿ ಮಾಲೀಕರ ಸಭೆ: ನಂತರ ಡಿವೈಎಸ್‍ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಿನಸಿ ಅಂಗಡಿ ಮಾಲೀಕರ ಸಭೆ ನಡೆಸಲಾಯಿತು. ಪಟ್ಟಣ ವ್ಯಾಪ್ತಿ ಸೇರಿದಂತೆ ಗ್ರಾಮೀಣ ಭಾಗದ ಮನೆ ಮನೆಗೆ ತೆರಳಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವದು. ವರ್ತಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಇಲಾಖೆಗೆ ನೀಡಬೇಕು. ನಾಲ್ಕು ಚಕ್ರದ ವಾಹನಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಒದಗಿಸಲಾಗುವದು. ಪ್ರತಿಯೊಂದು ವಾಹನಕ್ಕೂ ಏರಿಯಾಗಳನ್ನು ನಿಗದಿ ಪಡಿಸಲಾಗುವದು. ಗ್ರಾಹಕರು ಕರೆ ಮಾಡಿದ ಸಂದರ್ಭ ಅಗತ್ಯ ವಸ್ತುಗಳನ್ನು ಪೂರೈಸಲು ವರ್ತಕರು ಸಿದ್ಧರಿರಬೇಕು ಎಂದು ಡಿವೈಎಸ್‍ಪಿ ತಿಳಿಸಿದರು.

ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕರುಗಳಾದ ನಂಜುಂಡೇಗೌಡ, ಮಹೇಶ್, ಠಾಣಾಧಿಕಾರಿ ಶಿವಶಂಕರ್, ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್ ಉಪಸ್ಥಿತರಿದ್ದರು.