ಗೋಣಿಕೊಪ್ಪಲು, ಮಾ.29: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಗರದ ನಾಗರಿಕರು ಸರತಿ ಸಾಲಿನಲ್ಲಿ ಆಗಮಿಸಿ ಹಾಲನ್ನು ಪಡೆದು ತಮ್ಮ ಮನೆಗೆ ತೆರಳಿದರು. ಮುಂಜಾನೆಯೇ ನಾಗರಿಕರಿಗೆ ಅನುಕೂಲವಾಗುವಂತೆ ದಿನಸಿ, ತರಕಾರಿ ಅಂಗಡಿಗಳು ತೆರೆದಿದ್ದವು.

ಹಸಿಮೀನು ಮಾರಾಟ ಜೋರಾಗಿತ್ತು. ಜನರು ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಪಡೆದರು. ತರಕಾರಿ, ದಿನಸಿ ವಸ್ತುಗಳ ಬೆಲೆಯು ಕೊಂಚ ಏರಿಕೆಯಾಗಿತ್ತು. ನಾಗರಿಕರು ಬಹುತೇಕ ಮಾಸ್ಕ್ ಧರಿಸಿ ನಗರಕ್ಕೆ ಆಗಮಿಸಿದ್ದರು. ಮುಂಜಾನೆಯ ಸಮಯದಲ್ಲಿ ವಾಕಿಂಗ್ ತೆರಳುವ ಮಂದಿ ಅಲ್ಲಲ್ಲಿ ಒಬ್ಬೊಬ್ಬರಾಗಿ ಕಾಣಿಸಿಕೊಂಡರು. ಅನಾವಶ್ಯಕ ಗುಂಪು ಸೇರುವುದು ಎಲ್ಲಿಯೂ ಕಂಡು ಬರಲಿಲ್ಲ. ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು, ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಆಯ ಕಟ್ಟಿನ ಜಾಗಗಳಲ್ಲಿ ಗಸ್ತು ಕಾರ್ಯಾಚರಣೆ ನಡೆಸಿದರು.

ಭಿಕ್ಷೆ ಬೇಡಿ ದಿನ ಕಳೆಯುವ ಹಿರಿಯ ಜೀವಗಳನ್ನು ಒಂದು ಒತ್ತಿನ ಆಹಾರಕ್ಕಾಗಿ ಕಷ್ಟ ಪಡುವುದು ಕಂಡುಬಂತು.ಕೆಲವು ನಾಗರಿಕರು ಇಂತಹವರಿಗೆ ತಮ್ಮ ಮನೆಯಿಂದ ತಂದ ಆಹಾರದ ಪೊಟ್ಟಣಗಳನ್ನು ಸ್ವಯಂ ಪ್ರೇರಣೆಯಿಂದ ವಿವರಿಸುತ್ತಿದ್ದರು.

ದ್ವಿಚಕ್ರ ವಾಹನಗಳು ಕೆಲಕಾಲ ನಗರದಲ್ಲಿ ಕಾಣಿಸಿಕೊಂಡವು. ದಿನದಿಂದ ದಿನಕ್ಕೆ ನಾಗರಿಕರು ತಮ್ಮ ಮನೆಗಳಿಂದ ಹೊರ ಬರುವುದನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಮುಂಜಾನೆಯ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಪಡೆದು ತೆರಳುತ್ತಿದ್ದಾರೆ.ದಿನ ಪತ್ರಿಕೆ ವಿತರಣೆಗೆ ಯಾವುದೇ ಅಡ್ಡಿ ಕಂಡು ಬರಲಿಲ್ಲ. - ಹೆಚ್.ಕೆ.ಜಗದೀಶ್