ಶನಿವಾರಸಂತೆ, ಮಾ. 28: ಶನಿವಾರಸಂತೆಯಲ್ಲಿ ಇಂದು ಸಂತೆದಿನ. ಆದರೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಂತೆಗೆ ಆಗಮಿಸುವ ಎರಡು ಪ್ರವೇಶ ದ್ವಾರಗಳನ್ನು ಪೊಲೀಸ್ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿ ವರ್ಗದವರು ಬ್ಯಾರಿಕೇಡ್‍ಗಳಿಂದ ತಡೆಯೊಡ್ಡಿದರು.

ಬೆಳಿಗ್ಗೆ ಸಂತೆ ಮಾರುಕಟ್ಟೆಯ ಹೊರಭಾಗದಲ್ಲಿ ತರಕಾರಿ ಅಂಗಡಿಗಳನ್ನು ತೆರೆದಿದ್ದು, ತರಕಾರಿ ಕೊಳ್ಳಲು ನಾಗರಿಕರು ಗುಂಪುಗೂಡಿದಾಗ, ಪೊಲೀಸರು ಲಾಠಿಯೊಂದಿಗೆ ಆಗಮಿಸಿದುದನ್ನು ನೋಡಿ ನಾಗರಿಕರು ಜಾಗ ಖಾಲಿ ಮಾಡಿದರು. ಪಂಚಾಯಿತಿ ಅಧಿಕಾರಿ ವರ್ಗದವರು ತರಕಾರಿ ಅಂಗಡಿಗಳನ್ನು ಖಾಲಿ ಮಾಡಿಸಿದರು.

ವಾರದಲ್ಲಿ 3 ದಿನಗಳಲ್ಲಿ (ಸೋಮವಾರ, ಬುಧವಾರ, ಶುಕ್ರವಾರ) ಮಾತ್ರ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಆಹಾರ, ದಿನಸಿ, ತರಕಾರಿ, ಹಣ್ಣು - ಹಂಪಲುಗಳ ಖರೀದಿಗೆ ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲು ವರ್ತಕರಿಗೆ ಸಮಯ ನಿಗದಿಪಡಿಸಿದಂತೆ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಜನ ಸಂಚಾರ, ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು. ಮೆಡಿಕಲ್ ಶಾಪಿಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ತೆರಳುತ್ತಿದ್ದುದು ಬಿಟ್ಟರೆ ಶನಿವಾರಸಂತೆ ಸ್ತಬ್ಧವಾಗಿತ್ತು.