ಸಿದ್ದಾಪುರ, ಮಾ. 28: ಬಂದ್ ಸಂದರ್ಭ ಅನಗತ್ಯವಾಗಿ ಸುತ್ತಾಡುತ್ತಿದ್ದ ಯುವಕರಿಗೆ ಪೊಲೀಸ್ ಲಾಠಿ ರುಚಿ ತೋರಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಪಟ್ಟಣದ ವರ್ತಕರ ಪುತ್ರನೋರ್ವ ತನ್ನ ಸ್ನೇಹಿತನೊಂದಿಗೆ ಮಾಸ್ಕ್ ಧರಿಸದೇ ಅನಗತ್ಯವಾಗಿ ಬೈಕ್‍ನಲ್ಲಿ ಸುತ್ತಾಡುತ್ತಿದ್ದ ಸಂದರ್ಭ ಪೊಲೀಸರು ತಡೆದು ಲಾಟಿ ರುಚಿ ತೋರಿಸಿ ಬೈಕನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಠಾಣಾಧಿಕಾರಿ ಬೋಜಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಗ್ರಾಮ ಲೆಕ್ಕಿಗ ಓಮಪ್ಪ ಬಣಕರ್ ಹಾಗೂ ಗ್ರಾಮಸ್ಥರಾದ ಅಂದಾಯಿ ಅವರೊಂದಿಗೆ 10 ಯುವಕರು ಸೇರಿ 800ಕ್ಕೂ ಅಧಿಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಮನೆಮನೆಗಳಿಗೆ ಪೂರೈಕೆ ಮಾಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.