ಹೆಬ್ಬಾಲೆ, ಮಾ. 28: ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ಹರಡದಂತೆ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಆತಂಕದಲ್ಲಿ ಜನರು ದಿನದೂಡುತ್ತಿರುವ ಸಂದರ್ಭ ಮೊನ್ನೆ ರಾತ್ರಿ ಸುರಿದ ಮಳೆಗೆ ರೈತರ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ಹಿಂದಿನ ರಾತ್ರಿ ಸತತ ಎರಡು ತಾಸುಗಳಿಗೂ ಹೆಚ್ಚು ಕಾಲ ಸುರಿದ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಗೆ ರೈತರು ಕೈಗೊಂಡಿದ್ದ ಹನಿ ನೀರಾವರಿ ಕೃಷಿ ಸಂಪೂರ್ಣ ಮಣ್ಣುಪಾಲು ಆಗಿದೆ. ಶಿರಂಗಾಲ ಗ್ರಾಮದ ಪ್ರಗತಿಪರ ರೈತ ಎಂ.ಕೆ. ಶಶಿಧರ್ ಅವರು 4 ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬಾಳೆ ಕೃಷಿ ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣ ಹಾನಿಯಾಗಿದೆ. ಬಾಳೆ ಗಿಡಗಳು ಗೊನೆ ಸಮೇತ ನೆಲಕಚ್ಚಿಹೋಗಿವೆ. ಜೊತೆಗೆ ಎರಡು ಎಕರೆ ಪ್ರದೇಶದಲ್ಲಿ ಕೈಗೊಂಡಿದ್ದ ಶುಂಠಿ ಕೃಷಿ ಕೂಡ ನೀರಿನಿಂದ ಆವೃತ್ತಗೊಂಡು ಹಾನಿಯಾಗಿದೆ.
ಅದೇ ರೀತಿ ಅಳುವಾರ, ಸಿದ್ದಲಿಂಗಪುರ, ಹಳಗೋಟೆ, ಮರೂರು, ಹೆಬ್ಬಾಲೆ, ತೊರೆನೂರು, ಕೂಡಿಗೆ, ಹುದುಗೂರು, ಹಾರಂಗಿ ಸುತ್ತಲಿನ ಪ್ರದೇಶಗಳಲ್ಲೂ ಕೂಡ ರೈತರು ಬೆಳೆದಿದ್ದ ಬಾಳೆ, ಶುಂಠಿ, ಗೆಣಸು ಹಾನಿ ಉಂಟಾಗಿದೆ.
ಮನೆಗಳಿಗೆ ಹಾನಿ: ಬಿರುಗಾಳಿ ಮಳೆಗೆ ತೊರೆನೂರು ಗ್ರಾಮದಲ್ಲಿ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿ ನಷ್ಟ ಉಂಟಾಗಿದೆ. ಗ್ರಾಮದ ಟಿ.ಟಿ. ಹನುಮಂತಪ್ಪ, ಕುಮಾರ, ಪಾಂಡುರಂಗ, ಪ್ರಸನ್ನ, ಕಿರಣ್ ಎಂಬವರ ಮನೆಗಳಿಗೆ ಹಾನಿ ಆಗಿದೆ.
ಬಿರುಗಾಳಿ ಮಳೆಗೆ ಸಿಲುಕಿ ಹಾನಿಯಾಗಿರುವ ಕೃಷಿ ಹಾಗೂ ಮನೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ರೈತರು ಆಗ್ರಹಿಸಿದ್ದಾರೆ.