ಗಡಿ ಬಂದ್: ಅಂಬ್ಯುಲೆನ್ಸ್‍ನಲ್ಲೇ ಶಿಶು ಜನನ ಮಂಗಳೂರು, ಮಾ. 28: ಗರ್ಭಿಣಿ ಮಹಿಳೆಯಿದ್ದ ಆ್ಯಂಬ್ಯುಲೆನ್ಸ್‍ನ್ನು ಮಂಗಳೂರಿನತ್ತ ಬರಲು ಪೊಲೀಸರು ಬಿಡದ ಕಾರಣ ಬಿಹಾರದಿಂದ ವಲಸೆ ಬಂದಿದ್ದ ಗರ್ಭಿಣಿ ಆ್ಯಂಬ್ಯುಲೆನ್ಸ್‍ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಲಾಕ್‍ಡೌನ್ ಹಿನ್ನೆಲೆ ಗಡಿಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಆ್ಯಂಬ್ಯುಲೆನ್ಸ್ ಸೇರಿದಂತೆ ಕೇರಳದಿಂದ ಯಾವುದೇ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಕರ್ನಾಟಕ ಪೊಲೀಸರು ಗಡಿ ಭಾಗ ತಲಪಾಡಿಯಲ್ಲಿ ಆ್ಯಂಬ್ಯುಲೆನ್ಸ್ ತಡೆದಿದ್ದಾರೆ. ನಂತರ ಆ್ಯಂಬ್ಯುಲೆನ್ಸ್ ಚಾಲಕ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ಆ ಮಹಿಳೆ ಆ್ಯಂಬ್ಯುಲೆನ್ಸ್‍ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಿಹಾರದ ಪಾಟ್ನಾದಿಂದ ವಲಸೆ ಬಂದಿದ್ದ 25 ವರ್ಷದ ಗೌರಿ ದೇವಿ ಮತ್ತು ಆಕೆಯ ಪತಿ ಉತ್ತರ ಕೇರಳ ಜಿಲ್ಲೆಯ ಪ್ಲೇವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ರೈಲ್ವೆ ಬೋಗಿಗಳಲ್ಲಿ ಪ್ರತ್ಯೇಕ ವಾರ್ಡ್
ನವದೆಹಲಿ, ಮಾ. 28: ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಹವಾ ನಿಯಂತ್ರಿತ ರಹಿತ ರೈಲ್ವೆ ಬೋಗಿಗಳನ್ನು ಪ್ರತ್ಯೇಕ ವಾರ್ಡ್‍ಗಳಾಗಿ ಭಾರತೀಯ ರೈಲ್ವೆ ಪರಿವರ್ತಿಸಿದೆ. ಮುಂದಿನ ಕೆಲ ದಿನಗಳಲ್ಲಿ ಈ ಪ್ರತ್ಯೇಕ ವಾರ್ಡ್‍ಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸರಿಯಾದರೆ ಪ್ರತಿ ರೈಲ್ವೆ ವಲಯಗಳ ರೈಲುಗಳಲ್ಲಿ ಪ್ರತಿವಾರ 10 ಬೋಗಿಗಳನ್ನು ಇದಕ್ಕೆ ಬಳಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಬೋಗಿಗಳನ್ನು ಅತ್ಯಾಧುನಿಕ ಪ್ರತ್ಯೇಕ ವಾರ್ಡ್‍ಗಳನ್ನಾಗಿ ಮಾಡಲು ಬೋಗಿಯ ಮಧ್ಯಮ ಬರ್ತ್‍ನ್ನು ತೆಗೆದು ಕೆಳಗಿನ ಕಂಪಾರ್ಟ್‍ಮೆಂಟನ್ನು ಪ್ಲೈವುಡ್‍ಗೆ ಜೋಡಿಸಿ ವಿಭಾಗ ಮಾಡಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ. ಪ್ರತಿ ಬೋಗಿಯಲ್ಲಿ 10 ಐಸೊಲೇಷನ್ ವಾರ್ಡ್‍ಗಳಿರುತ್ತದೆ. ವೈದ್ಯಕೀಯ ಉಪಕರಣಗಳನ್ನು ಜೋಡಿಸಿಕೊಳ್ಳಲು ರೈಲ್ವೆ 220 ವೋಲ್ಟ್ ಎಲೆಕ್ಟ್ರಿಕಲ್ ಪಾಯಿಂಟ್‍ಗಳನ್ನು ಪ್ರತಿ ಬೋಗಿಗಳಲ್ಲಿ ಒದಗಿಸಿ ಅಲ್ಲಿ ಗಾಳಿ ಪರದೆ ಮೂಲಕ ಒಬ್ಬ ರೋಗಿಯಿಂದ ಮತ್ತೊಬ್ಬ ರೋಗಿಯನ್ನು ಪ್ರತ್ಯೇಕಿಸಲಾಗುತ್ತದೆ. ಹೊರಗಿನಿಂದ 415 ವೋಲ್ಟ್‍ಗಳನ್ನು ರೈಲ್ವೆ ಇಲಾಖೆ ಒದಗಿಸಲಿದೆ.
ದಕ್ಷಿಣ ಕನ್ನಡಕ್ಕೆ ಸುಧಾಮೂರ್ತಿ ನೆರವು
ಮಂಗಳೂರು, ಮಾ. 28: ಮಾರಕ ಕೊರೊನಾ ಸೋಂಕು ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ನೆರವು ನೀಡಿದ್ದಾರೆ. ಕೊರೊನಾ ಸೋಂಕು ನಿಗ್ರಹ ಹಾಗೂ ಪರೀಕ್ಷೆಗೆ ಅನುಕೂಲವಾಗುವಂತೆ ರೂ. 28 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸುಧಾ ಮೂರ್ತಿಯವರು ದೇಣಿಗೆಯಾಗಿ ನೀಡಿದ್ದಾರೆ. ಮಂಗಳೂರು ಪೊಲೀಸರ ಕರೆಗೆ ಮೂರ್ತಿ ಸ್ಪಂದಿಸಿದ್ದು, 36 ಗಂಟೆಗಳಲ್ಲಿ 28 ಲಕ್ಷ ರೂಪಾಯಿ ಮೌಲ್ಯದ ನಿರ್ಣಾಯಕ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಎಂ.ಎಸ್. ಸುಧಾ ಮೂರ್ತಿ ಪ್ರತಿಕ್ರಿಯಿಸಿದ್ದಾರೆ ಮತ್ತು 36 ಗಂಟೆಯೊಳಗೆ 28 ಲಕ್ಷ ರೂಪಾಯಿಗಳ ವಿಮರ್ಶಾತ್ಮಕ ವೈದ್ಯಕೀಯ ಸರಬರಾಜು ಮಂಗಳೂರಿಗೆ ತಲುಪಿದೆ ಎಂದು ನಗರ ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ. ವೈದ್ಯಕೀಯ ಸಾಮಗ್ರಿಗೊಳೊಡನೆ ಸಹಾಯ ಮಾಡುವುದಾಗಿ ಸರ್ಕಾರಕ್ಕೆ ನೀಡಿದ ಭರವಸೆಯನ್ನು ನೆರವೇರಿಸಿದ ಸುಧಾಮೂರ್ತಿಯವರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.