ಗೋಣಿಕೊಪ್ಪಲು, ಮಾ. 27: ಕಾಫಿ ತೋಟವೊಂದರಲ್ಲಿ ಕಾರ್ಮಿಕ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಕಸ್ಮಾತ್ತಾಗಿ ಎದುರಾದ ಕಾಡುಕೋಣವು ಈತನ ಮೇಲೆರೆಗಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುಮಟೂರು ಬಳಿಯಿಂದ ವರದಿಯಾಗಿದೆ.

ಮೃತ ವ್ಯಕ್ತಿ ಪರಿಶಿಷ್ಟ ಪಂಗಡದ ಕಾರ್ಮಿಕ ರಾಜು (52) ಎಂದು ತಿಳಿದು ಬಂದಿದೆ. ಶುಕ್ರವಾರ ಎಂದಿನಂತೆ ಬೆಳೆಗಾರರಾದ ಮಣಿ ದೇವಯ್ಯನವರ ಕಾಫಿ ತೋಟದಲ್ಲಿ ಕೆಲಸದಲ್ಲಿ ತೊಡಗಿದ್ದರು. ಮಧ್ಯಾಹ್ನ 1.30 ಸಮಯದಲ್ಲಿ ಸಮೀಪದ ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ಕಾಫಿ ತೋಟದತ್ತ ಹೆಜ್ಜೆ ಹಾಕಿದ ಕಾಡುಕೋಣ ರಾಜುವಿನ ಮೇಲೆರಗಿ ಬೆನ್ನು ಹಾಗೂ ಎದೆಯ ಭಾಗಕ್ಕೆ ಮಾರಣಾಂತಿಕ ಘಾಸಿಗೊಳಿಸಿದೆ. ಅಕ್ಕಪಕ್ಕದಲ್ಲೇ ಇದ್ದ ಕಾರ್ಮಿಕರು ಬೊಬ್ಬೆ ಹೊಡೆದ ಪರಿಣಾಮ ಕಾಡುಕೋಣ ಕಾಲ್ಕಿತ್ತಿದೆ. ರಕ್ತ ಸ್ರಾವದಿಂದ ಬಳಲುತ್ತಿದ್ದ ಕಾರ್ಮಿಕ ರಾಜು ಅವರನ್ನು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಕುಟ್ಟ ಪೊಲೀಸ್ ವೃತ್ತನಿರೀಕ್ಷಕ ಪರಶಿವಮೂರ್ತಿ ಮಾಹಿತಿ ನೀಡಿದರು. ಹೆಚ್ಚಿನ ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆಯ ಪೊನ್ನಂಪೇಟೆ ಆರ್.ಎಫ್.ಒ. ತೀರ್ಥ ಅವರು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಪ್ರಾಣ ಉಳಿಸಲು ಅಧಿಕಾರಿಗೆ ಸಾಧ್ಯವಾಗಲಿಲ್ಲ. ಕಾರ್ಮಿಕ ರಾಜು ಮೂಲತಃ ಸಿದ್ದಾಪುರ ಸಮೀಪದ ಕರಡಿಗೋಡು ನಿವಾಸಿ ಎಂದು ತಿಳಿದು ಬಂದಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತಪಟ್ಟ ವ್ಯಕ್ತಿ ರಾಜುವಿನ ಸಂಬಂಧಿಕರಿಗೆ 7.50 ಲಕ್ಷ ಪರಿಹಾರ ಹಣ ನೀಡುವದಾಗಿ ಅಧಿಕಾರಿ ತೀರ್ಥ ಮಾಹಿತಿ ನೀಡಿದರು. - ಹೆಚ್.ಕೆ.ಜಗದೀಶ್