ಮಡಿಕೇರಿ, ಮಾ. 27: ಕೊಡಗು ಜಿಲ್ಲೆಯೂ ಸೇರಿದಂತೆ ವಿಶ್ವಕ್ಕೆ ಸವಾಲಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವುದರೊಂದಿಗೆ; ದೇಶದ ಜನತೆಯ ರಕ್ಷಣೆಗಾಗಿ ಕೇಂದ್ರ ಸರಕಾರವು ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ 1897ರ ಸಾಂಕ್ರಾಮಿಕ ರೋಗ ಹರಡುವಿಕೆ ತಡೆ ಕಾಯ್ದೆಯನ್ವಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಮಾಜೀ ಅಧ್ಯಕ್ಷರೂ, ಕಾನೂನು ತಜ್ಞರಾಗಿರುವ ಶಾಸಕ ಕೆ.ಜಿ. ಬೋಪಯ್ಯ ವಿವರಣೆ ನೀಡಿದ್ದಾರೆ.

ಇಂದು ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಎದುರಿಸುತ್ತಿರುವ ಸನ್ನಿವೇಶದಲ್ಲಿ ಕೇಂದ್ರ, ರಾಜ್ಯ ಸರಕಾರಗಳೊಂದಿಗೆ ಜನತೆ ಜಿಲ್ಲಾಡಳಿತದ ಆದೇಶಗಳನ್ನು ಉಲ್ಲಂಘಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾದೀತು ಎಂದು ಅಭಿಪ್ರಾಯಪಟ್ಟರು.

ಈ ದಿಸೆಯಲ್ಲಿ ಜಿಲ್ಲಾಡಳಿತವು ಕಾಯ್ದೆ 188, 269, 270, 271ರ ಅಡಿಯಲ್ಲಿ ಸಾಕಷ್ಟು ಕಟ್ಟೆಚ್ಚರದೊಂದಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕೊಡಗಿನತ್ತ ಬರುವ ಕೇರಳ ಗಡಿ ರಸ್ತೆಗಳ ಸಹಿತ ಎಲ್ಲೆಡೆ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಜನರು ಸ್ವಯಂಪ್ರೇರಿತರಾಗಿ ಸಹಕರಿಸುವಂತೆ ತಿಳಿಹೇಳಿದರು.

ಆತಂಕದ ಛಾಯೆ: ಕೊಡಗಿಗೆ ಕೇರಳದ ಕಾಸರಗೋಡು ಜಿಲ್ಲೆ ಹೊಂದಿಕೊಂಡಿದ್ದು, ಅಲ್ಲಿ ವ್ಯಾಪಕ ಕೊರೊನಾ ಹರಡುವಿಕೆಯಿಂದ ತೀವ್ರ ಆತಂಕದ ಛಾಯೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು; ಇಂತಹ ಪರಿಸ್ಥಿತಿಯಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೂ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ ಎಂದರಲ್ಲದೆ; ಯಾರೊಬ್ಬರೂ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡದಂತೆ ಮಾರ್ನುಡಿದರು.

ಕಾರ್ಯ ಶ್ಲಾಘನೀಯ : ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ ತಾ. 22ರಂದು ಜನತಾ ಕಫ್ರ್ಯೂ ಸಹಿತ ಇದುವರೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಮತ್ತು ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳ ತಂಡ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯವೆಂದು ಇನ್ನೋರ್ವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಯಾರೇ ಉಲ್ಲಂಘಿಸಿದರೂ; ಅಂತವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವಂತೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ನೆನಪಿಸಿದರು.

ಜಿಲ್ಲಾಡಳಿತಕ್ಕೆ ಸಹಕಾರ : ಜಿಲ್ಲಾಡಳಿತ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯಪಡೆಯ ನಿರ್ದೇಶನದಂತೆ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೆ ಸಹಕಾರ ನೀಡಲಾಗುವುದು ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅನಿಸಿಕೆ ವ್ಯಕ್ತಪಡಿಸಿದರು.

ಒಳ್ಳೆಯ ಕೆಲಸಕ್ಕೆ ಬೆಂಬಲ : ಈ ವೇಳೆ ಪ್ರತಿಕ್ರಿಯಿಸಿದ ಇನ್ನೋರ್ವ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು, ಸರಕಾರ ಹಾಗೂ ಅಧಿಕಾರಿಗಳು ತೆಗೆದುಕೊಳ್ಳುವ ಒಳ್ಳೆಯ ಜನಪರ ಕೆಲಸಗಳಿಗೆ ತಾವು ಸದಾ ಬೆಂಬಲಿಸುವುದಾಗಿ ನಗು ಬೀರಿದರು.

ಕ್ರಮಕ್ಕೆ ಆಗ್ರಹ: ಕೊಡಗಿನ ಜನತೆಯ ಸುರಕ್ಷತೆಗೆ ಕಾಳಜಿ ತೋದರೆ ಯಾರಾದರೂ ಉದ್ದೇಶಪೂರ್ವಕವಾಗಿ ವಿದೇಶಗಳಿಂದ ಬಂದು ಕೊರೊನಾ ಸೋಂಕು ಹಬ್ಬಿಸಲು ಮುಂದಾದರೆ ಅಂತವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಆಗ್ರಹಿಸಿದರು. ಈ ವೇಳೆ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕೂಡ ದನಿಗೂಡಿಸಿ, ಕೆಲವರಿಗೆ ಕೊಡಗಿನ ಜನತೆಯಲ್ಲಿರುವ ಆತಂಕ ತಿಳಿಯದಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳು ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗುವಂತೆ ‘ಶಕ್ತಿ’ ಮೂಲಕ ಒತ್ತಾಯಿಸಿದರು.