ಮಡಿಕೇರಿ, ಮಾ. 27: ಕೊರೊನಾ ವೈರಸ್ ಆತಂಕದ ನಡುವೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೋಂಕು ಹರಡದಂತೆ ತಡೆಯಲು ರಾತ್ರಿ ಹಗಲೆನ್ನದೆ ಶ್ರಮಿಸುತ್ತಿದ್ದಾರÉ. ಈ ನಡುವೆ ನೌಕರರ ಕೊರತೆಯೂ ಕಾಡುತ್ತಿರುವುದರಿಂದ ಸಾಮಾಜಿಕ ಕಳಕಳಿ ಹೊಂದಿರುವ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಯಂ ಸೇವಕರಾಗಿ ದುಡಿಯಲು ಮುಂದೆ ಬಂದಿದ್ದಾರೆ. ಜಿಲ್ಲಾಡಳಿತ ಪಾಸ್‍ಗಳನ್ನು ನೀಡಿ ಶ್ರಮದಾನ ಮಾಡಲು ಅಧಿಕೃತವಾಗಿ ಅವಕಾಶ ನೀಡಿದರೆ ಜೆಡಿಎಸ್ ಸಮೂಹ ದುಡಿಯಲು ಸಿದ್ಧವಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ವಿಧಿಸುವ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೈದ್ಯಕೀಯ ಲೋಕಕ್ಕೆ ಸವಾಲೊಡ್ಡಿರುವ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಯುದ್ಧದ ರೀತಿಯಲ್ಲಿ ಹೋರಾಡುತ್ತಿದ್ದು, ಭಾರತ ಮತ್ತು ಕರ್ನಾಟಕ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಸರ್ಕಾರಗಳ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ, ಆದರೆ, ಬಡವರ ಬಗ್ಗೆ ಕಾಳಜಿಯಿರಲಿ ಎಂದು ಸಲಹೆÉಯಿತ್ತಿದ್ದಾರೆ.

ಈ ರೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಜನ, ಬಡವರ್ಗ ಹಾಗೂ ಕಾರ್ಮಿಕರ ಬಗ್ಗೆ ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಾಗಿದೆ. ತಕ್ಷಣ ದಿನಸಿ ಸಾಮಗ್ರಿ ಹಾಗೂ ತರಕಾರಿಯ ಕಿಟ್‍ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕ್ರಮವನ್ನು ಸರ್ಕಾರ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಕೇರಳ ಸರ್ಕಾರದ ಮಾದರಿಯನ್ನು ಅನುಸರಿಸಬಹುದಾಗಿದೆ ಎಂದು ಅವರು ಸಲಹೆಯಿತ್ತಿದ್ದಾರೆ.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಜಿಲ್ಲಾಡಳಿತ ನೀಡುವ ವಿನಾಯಿತಿ ಸಮಯದಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದುಕೊಳ್ಳುತ್ತವೆ. ಈ ಅಂಗಡಿಗಳಲ್ಲಿದ್ದ ದಾಸ್ತಾನು ಕೂಡ ಖಾಲಿಯಾಗುತ್ತಿದ್ದು, ದಿನದಿಂದ ದಿನಕ್ಕೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಮತ್ತು ಹಣ್ಣಿನ ಬೆಲೆ ಗಗನಕ್ಕೆ ಏರುತ್ತಿದೆ. ಇದು ಬಡವರ್ಗಕ್ಕೆ ನುಂಗಲಾರದ ತುತ್ತಾಗಿರುವುದರಿಂದ ಸರ್ಕಾರವೇ ಮನೆ ಬಾಗಿಲಿಗೆ ಸಾಮಗ್ರಿಗಳನ್ನು ನೀಡುವುದು ಸೂಕ್ತ ಎಂದಿದ್ದಾರೆ

ತೋಟಗಳಲ್ಲಿ ಕಾರ್ಮಿಕರು

ಲಾಕ್‍ಡೌನ್ ಆದೇಶವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೂ ಜಿಲ್ಲೆಯ ಕೆಲವು ತೋಟಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರು ಗುಂಪು ಗುಂಪಾಗಿ ಸೇರುವುದರಿಂದ ಸರ್ಕಾರದ ಆದೇಶ ಉಲ್ಲಂಘಿಸಿದಂತಾಗುತ್ತದೆ, ಅಲ್ಲದೆ ವೈದ್ಯಕೀಯ ಸಲಹೆಗಳಿಗೆ ವಿರುದ್ಧ ಕ್ರಿಯೆಯೂ ಆಗಿರುತ್ತದೆ. ಹೊಟ್ಟೆಪಾಡಿಗಾಗಿ ಕಾರ್ಮಿಕರು ಮಾಲೀಕರ ಮಾತಿಗೆ ಮಣಿದು ದುಡಿಮೆಯಲ್ಲಿ ತೊಡಗಿದ್ದಾರೆ. ಇದನ್ನು ತಪ್ಪಿಸಿ ಕಾರ್ಮಿಕರೂ ಮನೆಯಲ್ಲಿರುವಂತೆ ನೋಡಿಕೊಳ್ಳಲು ದಿನಸಿ ಮತ್ತು ತರಕಾರಿಯ ಕಿಟ್‍ಗಳನ್ನು ಸರ್ಕಾರದ ಮೂಲಕವೇ ಹಂಚಿಕೆ ಮಾಡಬೇಕು ಎಂದು ಗಣೇಶ್ ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿ ಗಿರಿಜನರು ವಾಸಿಸುತ್ತಿದ್ದು, “ಲಾಕ್‍ಡೌನ್” ನಿಂದ ಇವರ ಸ್ಥಿತಿ ಶೋಚನೀಯವಾಗಿದೆ. ದುರ್ಬಲರಾದ ಕಾಡಿನ ಜನರ ಸ್ಥಿತಿಗತಿ ಹೇಗಿದೆ ಎನ್ನುವ ಬಗ್ಗೆ ಗಿರಿಜನ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಗಮನ ಹರಿಸಲೇಬೇಕಾಗಿದೆ. ಇವರಿಗೂ ಅಗತ್ಯ ಆಹಾರ, ಔಷಧಿ ಮತ್ತು ಬಟ್ಟೆಯನ್ನು ಹಂಚುವ ಕಾರ್ಯವನ್ನು ಸರ್ಕಾರವೇ ಮಾಡಬೇಕು. ಹಸಿವಿನಿಂದ ಬಳಲುತ್ತಿರುವ ಬೀದಿಬದಿ ಅಲ್ಲಲ್ಲಿ ನೆಲೆ ನಿಂತಿರುವ ಬಡ ಕಾರ್ಮಿಕರು ಹಾಗೂ ಭಿಕ್ಷುಕರ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇರಿಸಿ ವೈದ್ಯಕೀಯ ತಪಾಸಣೆಯನ್ನು ವಾರಕ್ಕೆ ಒಂದು ಬಾರಿಯಾದರೂ ನಡೆಸಬೇಕು. ಬಿಸಿ ಬಿಸಿಯಾದ ಪೌಷ್ಟಿಕ ಆಹಾರವನ್ನು ಸರ್ಕಾರದ ವತಿಯಿಂದಲೇ ನೀಡಬೇಕು ಮತ್ತು ಸಕಾಲದಲ್ಲಿ ವೇತನ ಪಾವತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೊಳ್ಳೆಗಳ ಕಾಟ

ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಅನಾರೋಗ್ಯದ ವಾತಾವರಣದ ಈ ದಿನಗಳಲ್ಲಿ ಇದು ಹೆಚ್ಚು ಆತಂಕವನ್ನು ಸೃಷ್ಟಿಸಿದೆ. ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ವ್ಯವಸ್ಥೆಗಳು ತಕ್ಷಣ ಸೊಳ್ಳೆ ನಾಶಕಗಳನ್ನು ಸಿಂಪಡಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ನೀಡಬೇಕು ಎಂದು ಗಣೇಶ್ ಮನವಿ ಮಾಡಿದ್ದಾರೆ.

ಹಸುಗಳಿಗೆ ಆಹಾರವಿಲ್ಲ

ಕಳೆದ ಎರಡು ವರ್ಷಗಳಿಂದ ಕೊಡಗನ್ನು ಕಾಡಿದ ಅತಿವೃಷ್ಟಿಯ ಸಂದರ್ಭ ನೂರಾರು ಹಸುಗಳು ಬೀದಿ ಪಾಲಾಗಿದ್ದವು. ಇಷ್ಟು ದಿನ ಹೇಗೋ ಸಾರ್ವಜನಿಕರು ನೀಡಿದ ಆಹಾರ ಅಥವಾ ವ್ಯರ್ಥಗೊಂಡ ತರಕಾರಿ, ಹಣ್ಣುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀಡಾಡಿ ಹಸುಗಳು ಇಂದು ಆಹಾರದ ಕೊರತೆಯನ್ನು ಎದುರಿಸುತ್ತಿವೆ. ನಗರದಲ್ಲಿ ದೊಡ್ಡಿಯ ವ್ಯವಸ್ಥೆಯೂ ಇಲ್ಲದಿರುವುದರಿಂದ ಅನಾಥ ಹಸುಗಳು ಆಹಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿವೆ. ಅಲ್ಲದೆ ಬೀದಿ ನಾಯಿಗಳು ಕೂಡ ಆಹಾರ ದೊರೆಯದೆ ಹಸಿವಿನಿಂದ ಅಲೆಯುತ್ತಿದ್ದು, ಈ ಬೆಳವಣಿಗೆ ಹೆಚ್ಚು ಅಪಾಯಕಾರಿಯಾಗಿದೆ. ಮಾನವೀಯತೆ ದೃಷ್ಟಿಯಿಂದ ಮೂಕ ಪ್ರಾಣಿಗಳ ಸಮಸ್ಯೆಗೂ ಸರ್ಕಾರವೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.