ಶ್ರೀಮಂಗಲ, ಮಾ. 26: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿಗೆ ಎರಡು ಜಾನುವಾರುಗಳು ಬಲಿಯಾಗಿವೆ. ಮಂಗಳವಾರ ರಾತ್ರಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಹರ ಗ್ರಾಮದ ಅಜ್ಜಿಕುಟ್ಟಿರ ರಾಜು ದೇವಯ್ಯ ಅವರಿಗೆ ಸೇರಿದ ಗರ್ಭಧರಿಸಿದ್ದ ಹಸು ಮತ್ತು ಹೋರಿ ಮೇಲೆ ಹುಲಿ ದಾಳಿ ನಡೆಸಿದ್ದು, ಹೋರಿಯನ್ನು ಅಲ್ಲೇ ಬಿಟ್ಟು, ಹಸುವನ್ನು 5 ಅಡಿ ಎತ್ತರದ ಬರೆ ಹತ್ತಿ ಸುಮಾರು 30 ಮೀಟರ್ ದೂರ ತೋಟಕ್ಕೆ ಎಳೆದೊಯ್ದು, ಹಸುವಿನ ಹೊಟ್ಟೆಯನ್ನು ಸೀಳಿ, ಗರ್ಭದಲ್ಲಿದ್ದ ಕರುವನ್ನು ತಿಂದುಹಾಕಿದೆ. ಕರುವನ್ನು ತಿಂದು ಹಸುವನ್ನು ತೋಟದಲ್ಲಿ ಒಣಗಿದ ಎಲೆಗಳಿಂದ ಮುಚ್ಚುವ ಪ್ರಯತ್ನವನ್ನು ಹುಲಿ ಮಾಡಿರುವುದು ಗೋಚರಿಸಿದೆ.
ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಜಾನುವಾರುಗಳ ಮರಣೋತ್ತರ ಪರೀಕ್ಷೆ ಮಾಡಿದರು.ಬಲಿಯಾಗಿರುವ ಹಸು ಮಿಶ್ರ ತಳಿ ಆಗಿದ್ದು, ಇನ್ನೂ ಒಂದೆರಡು ದಿನದಲ್ಲಿ ಕರು ಹಾಕುತ್ತಿತ್ತು ಎಂದು ಹೇಳಿದರು.
ಜಾನುವಾರುಗಳನ್ನು ರಾಜು ದೇವಯ್ಯ ಅವರ ಮನೆ ಸಮೀಪ ಕೊಟ್ಟಿಗೆಯ ಹೊರಾಂಗಣದಲ್ಲಿ ಕಟ್ಟಿಹಾಕಲಾಗಿತ್ತು. ಸ್ಥಳಕ್ಕೆ ಪೆÇನ್ನಂಪೇಟೆ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಮಹಜರು ನಡೆಸಿದರು.
ಸ್ಥಳದಲ್ಲಿ ಹುಲಿ ಸೆರೆಗೆ ಎರಡು ಬೋನು ಇರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹಾಗೆಯೇ ಹುಲಿಯ ಚಿತ್ರಣ ಸೆರೆ ಹಿಡಿಯಲು ಎರಡು ಡಿಜಿಟಲ್ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಂಡಿದೆ.