ಕೂಡಿಗೆ, ಮಾ. 26: ಕುಶಾಲನಗರ ಹೋಬಳಿ ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ಭಾಗದ ಗ್ರಾಮಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಸಿದ್ದಲಿಂಗಪುರ ಸೇರಿದಂತೆ 20 ಗ್ರಾಮಗಳಲ್ಲಿ ಸಂಪ್ರದಾಯದ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಹಬ್ಬದ ದಿನದಂದು ಗ್ರಾಮಗಳಲ್ಲಿ ಗ್ರಾಮಸ್ಥರ ಓಡಾಟ ಕಡಿಮೆ ಇತ್ತು. ಲಾಕ್‍ಡೌನ್ ಹಿನ್ನೆಲೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಗಳ ಕಾಲದಲ್ಲಿ ದಿನಸಿ ಹಾಗೂ ತರಕಾರಿ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಯುಗಾದಿ ಹಬ್ಬದ ದಿನ ನಡೆಯುವ ಹೊನ್ನೂರು ಪೂಜೋತ್ಸವವನ್ನು ಮುಂದೂಡಲಾಗಿದೆ. ಸಂಪ್ರದಾಯದಂತೆ ಸರಳವಾಗಿ ದೇವಾಲಯಗಳಲ್ಲಿ ಪೂಜೆ ನಡೆಯಿತು. ಈ ವ್ಯಾಪ್ತಿಯ ಗ್ರಾಮಗಳಲ್ಲಿ ಪೊಲೀಸ್ ಬಂದೋಬಸ್ತ್ ಕಟ್ಟುನಿಟ್ಟಾಗಿತ್ತು. ಪೊಲೀಸರು ಕೆಲ ಬೈಕ್, ಆಟೋ, ಕಾರು ಸವಾರರಿಗೆ ಲಾಠಿಯ ರುಚಿ ತೋರಿಸಿದರು.

ಕೂಡಿಗೆ -ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೈಗಾರಿಕಾ ಕೇಂದ್ರಗಳು ಸ್ಥಗಿತಗೊಂಡಿದ್ದವು. ನೀಡಿದ ಸಮಯದಲ್ಲಿ ಗ್ರಾಮಸ್ಥರು ಅಂಗಡಿಗಳಲ್ಲಿ ಸಿಗುವ ವಸ್ತುಗಳನ್ನು ಹೆಚ್ಚು ಬೆಲೆ ನೀಡಿ ಕೊಂಡುಕೊಳ್ಳುವ ದೃಶ್ಯ ಕಂಡುಬಂದಿತು.

ಹಳ್ಳಿಗಳಲ್ಲಿ ಕಡಿದ ಮಾಂಸವನ್ನು ದುಬಾರಿ ಹಣದಲ್ಲಿ ಮಾರಾಟ ಮಾಡಲಾಗುತಿತ್ತು. ಯುಗಾದಿ ಹಬ್ಬದ ಮರುದಿನ ಒಂದು ಕೆ.ಜಿ. ಕುರಿ ಮಾಂಸ ರೂ. 700 ಆದರೆ ಕೋಳಿ ಮಾಂಸ ರೂ. 300ಕ್ಕೆ ಮಾರಾಟವಾಗಿದೆ. ಇಂತಹ ಬೆಲೆ ಇದ್ದರೂ ಗ್ರಾಹಕರು ಖರೀದಿಸುತ್ತಿದ್ದದ್ದು ವಿಶೇಷವಾಗಿತ್ತು.