ಮಡಿಕೇರಿ, ಮಾ. 26 : ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ತುರ್ತು ಯೋಜನೆಯನ್ನು ರೂಪಿಸುವ ಬಗ್ಗೆ ಕೊಡಗು ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯರುಗಳೊಂದಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತುರ್ತು ಸಭೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ವೈದ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲೆಯಾದ್ಯಂತ ಫೀವರ್ ಸೆಂಟರ್ ಮತ್ತು ಕೋವಿಡ್-19 ಕೇರ್ ಸೆಂಟರ್‍ಗಳನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು. ಜೊತೆಗೆ ಕೊರೊನಾ ವೈರಸ್ ಅನ್ನು ಹತ್ತಿಕ್ಕಲು ಜಿಲ್ಲಾಡಳಿತಕ್ಕೆ ಎಲ್ಲಾ ಸಹಕಾರ ನೀಡಲಾಗುವುದು ಎಂದು ಖಾಸಗಿ ವೈದ್ಯರು ಭರವಸೆ ನೀಡಿದರು.

ಹಾಗೆಯೇ ಕೊರೊನಾ ವೈರಸ್ ವಿರುದ್ಧ ಸರ್ಕಾರದ ಜೊತೆಯಾಗಿ ಹೋರಾಡಲು ಜಿಲ್ಲೆಯ ಭಾರತೀಯ ವೈದ್ಯಕೀಯ ಸಂಘವು ಸಿದ್ಧವಿದೆ ಎಂದು ಖಾಸಗಿ ವೈದ್ಯರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ, ಖಾಸಗಿ ಆಸ್ಪತ್ರೆಯ ವೈದ್ಯರು, ಮುಖ್ಯಸ್ಥರು ಇತರರು ಇದ್ದರು.