ಮಡಿಕೇರಿ, ಮಾ. 26: ‘ಭಾರತ ಲಾಕ್ಡೌನ್’ ನಡುವೆ ಕೊಡಗು ಜಿಲ್ಲಾಡಳಿತವು; ಜನತೆಯ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಕಾಲಾವಕಾಶ ಕಲ್ಪಿಸಿದೆ. ಹೀಗಿದ್ದರೂ ಕೆಲವರು ಜಿಲ್ಲಾಡಳಿತದ ಸೂಚನೆ ಪಾಲಿಸದೆ ಅಪರಾಹ್ನ 2 ಗಂಟೆಯಾದರೂ ಅಂಗಡಿಗಳನ್ನು ತೆರೆದುಕೊಂಡಿದ್ದರು. ಗ್ರಾಹಕರ ನೆಪದಲ್ಲಿ ಅನೇಕರು ಬೀದಿ ಬೀದಿ ಅಲೆಯುತ್ತಿದ್ದ ಚಿತ್ರಣ ಎದುರಾಯಿತು.
ಇಂತಹವರನ್ನು ತಹಬದಿಗೆ ತರುವಲ್ಲಿ ಪೊಲೀಸರು ಧ್ವನಿವರ್ಧಕ ಸಹಿತ ಮುನ್ನೆಚ್ಚರಿಕೆ ನೀಡುತ್ತಾ ಚದುರಿಸುವುದರೊಂದಿಗೆ, ಸಮಯ ಪಾಲಿಸದ ವರ್ತಕರಿಗೂ ತಮ್ಮ ತಮ್ಮ ಒಳಿತಿಗಾಗಿ ವಹಿವಾಟು ಸ್ಥಗಿತಗೊಳಿಸಿ ಮನೆ ಸೇರುವಂತೆ ತಾಕೀತು ಮಾಡುತ್ತಿದ್ದದ್ದು ಕಂಡುಬಂತು.
ಅವಶ್ಯಕ ವಸ್ತುಗಳೊಂದಿಗೆ ಕೆಲವೆಡೆ ಇತರ ಮಳಿಗೆಗಳು ತೆರೆದುಕೊಂಡಿದ್ದರೆ; ಕೈಗಾರಿಕಾ ಬಡಾವಣೆಯಲ್ಲಿ ವಾಹನಗಳ ದುರಸ್ತಿ ಕೆಲಸ ಕೂಡ ಗೋಚರಿಸಿತು. ಒಟ್ಟಿನಲ್ಲಿ ಜನತೆಯ ಸುರಕ್ಷತೆಗಾಗಿ ಜಿಲ್ಲಾಡಳಿತ ಹಾಗೂ ಸರಕಾರಗಳು ಶ್ರಮಿಸುತ್ತಿದ್ದರೆ; ಇಂತಹ ಮಂದಿ ಅದು ಇನ್ನಾರಿಗೋ ಎಂಬಂತೆ ವರ್ತಿಸುತ್ತಾ, ಪೊಲೀಸರಿಗೆ ಒತ್ತಡದೊಂದಿಗೆ ಕೆಲಸ ಕೊಟ್ಟಂತಿತ್ತು.