ಮಡಿಕೇರಿ, ಮಾ. 24 : ಜಿಲ್ಲೆಯಲ್ಲಿ ಉಲ್ಬಣ ಆಗಬಹುದಾದ ಕೊರೊನಾ ಸೋಂಕು ಹಾಗೂ ಸೋಂಕಿತರ ವಾಸ್ತವ್ಯ ಮತ್ತು ಶುಶ್ರೂಷೆಗೆ ಪೂರ್ಣ ವ್ಯವಸ್ಥೆ ಮಾಡುತ್ತಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಹೋಂಸ್ಟೇ ಅಸೋಸಿಯೇಷನ್ ಹಾಗೂ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರೊಂದಿಗೆ ವೀಡಿಯೋ ಮೂಲಕ ಸಭೆ ನಡೆಸಿದರು.
ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದರೆ, ಅವರನ್ನು ಇರಿಸಲು ಸಾಕಷ್ಟು ಕೋಣೆಗಳ ಅವಶ್ಯಕತೆ ಇದ್ದು, ಹೊಟೇಲ್ ಹಾಗೂ ಹೋಂ ಸ್ಟೇಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕ್ಲಬ್ ಮಹೀಂದ್ರಾ ಮಡಿಕೇರಿ ಹಾಗೂ ವೀರಾಜಪೇಟೆಯ ರೆಸಾರ್ಟ್ಗಳು ವಾಸ್ತವ್ಯ ಒದಗಿಸಲು ಮುಂದಾಗಿದ್ದು, ವಸತಿ ನೀಡಲು ಸಾಧ್ಯವುಳ್ಳ ಎಲ್ಲರೂ ಮುಂದೆ ಬರುವಂತೆ ಕೋರಿದರು.
ಅಧಿಕೃತ ಹೋಂ ಸ್ಟೇಗಳಲ್ಲಿ ಹೆಚ್ಚಿನವು ಕುಟುಂಬಗಳು ವಾಸವಿದ್ದು, ಪ್ರತ್ಯೇಕ ಇರುವಲ್ಲಿ ಸಹಕಾರ ಕೋರುವುದಾಗಿ ಅಧ್ಯಕ್ಷ ಬಿ.ಜಿ. ಅನಂತ ಶಯನ ಹೇಳಿದರು. ಮಾಲೀಕರು ಗಳಿಲ್ಲದ ಅನಧಿಕೃತ ಹೋಂ ಸ್ಟೇಗಳ ಸಹಕಾರ ಪಡೆಯುವದಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಹೇಳಿದರು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಈ ಹಿಂದೆ ತಮ್ಮ ಸಂಘದ ಮೂಲಕ ಎರಡು ಸಾವಿರ ಕೋಣೆಗಳನ್ನು ನೀಡಿದ ಉದಾಹರಣೆ ಇದ್ದು, ಈ ಬಾರಿಯೂ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲೆಯ ಪ್ರತಿ ಹೋಬಳಿಗಳಲ್ಲೂ ಒಂದೊಂದು ಕೇಂದ್ರವನ್ನು ಗುರುತಿಸಿ ಸಮಸ್ಯೆ ಎದುರಿಸಲು ತಯಾರಿ ಮಾಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.